ಮಂಗಳೂರಿನಲ್ಲಿ ಎರಡು ‘ಶಂಕಿತ ನಿಪ್ಹಾ’ ಪ್ರಕರಣಗಳು ಪತ್ತೆ

Update: 2018-05-22 13:45 GMT

ಮಂಗಳೂರು.22:ಕೇರಳದಲ್ಲಿ ಕಂಡು ಬಂದ ನಿಪ್ಹಾ ವೈರಸ್ ರೋಗದ ಲಕ್ಷಣಗಳ ಎರಡು ಪ್ರಕರಣಗಳು ಜಿಲ್ಲೆಯಲ್ಲೂ ಪತ್ತೆಯಾಗಿದೆ .ಆದರೆ ಈ ಎರಡು ಪ್ರಕರಣಗಳು ಇನ್ನೂ ಖಚಿತಗೊಂಡಿಲ್ಲ ಶಂಕಿತ ರೋಗಿಗಳ ರಕದ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಮಣಿಪಾಲದ ಎಂಸಿವಿಆರ್ ಕೇಂದ್ರಕ್ಕೆ ಕಳುಹಿಸಲಾಗಿದೆ ಬಳಿಕ ಪುಣೆಯ (ಎನ್‌ವಿಐ )ನ್ಯಾಶನಲ್ ಇನ್ಸಟ್ಯೂಟ್ ಆಫ್ ವೈರಾಲಜಿ ಇದನ್ನು ದೃಡಪಡಿಸಬೇಕಾಗಿದೆ. ಎರಡು ದಿನಗಳ ಬಳಿಕ ಶಂಕಿತ ಪ್ರಕರಣಗಳ ಬಗ್ಗೆ ಖಚಿತವಾಗಿ ಹೇಳಬಹುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ರಾವ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪತ್ತೆಯಾದ ಶಂಕಿತ ನಿಪ್ಹಾ ಪ್ರಕರಣದಿಂದ ಬಳಲುತ್ತಿರುವ ಇಬ್ಬರಲ್ಲಿ ಒಬ್ಬರು ಕೇರಳ ಮೂಲದವರಾಗಿದ್ದು ಇನ್ನೊಬ್ಬರು ಜಿಲ್ಲೆಯವರಾಗಿದ್ದು ಹೊರ ರಾಜ್ಯದಲ್ಲಿ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಈ ಸೋಂಕು ತಗುಲಿರಬೇಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಕೇರಳದಿಂದ ಪ್ರತಿದಿನ ನೂರಾರು ಮಂದಿ ಕರ್ನಾಟಕದ ಗಡಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವುದರಿಂದ ಇಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ ಎಂದು ಡಾ.ರಾಮಕೃಷ್ಣ ತಿಳಿಸಿದ್ದಾರೆ.

►ಜಿಲ್ಲೆಯ ಜನತೆ ಗಾಬರಿ ಪಡಬೇಕಾಗಿಲ್ಲ ಆದರೆ ಎಚ್ಚರ ವಹಿಸಬೇಕು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಪ್ಹಾ ರೋಗ ಇದುವರೆಗೆ ಖಚಿತಗೊಂಡಿಲ್ಲ ಆದುದರಿಂದ  ವದಂತಿಗಳ ಬಗ್ಗೆ ಗಾಬರಿಗೊಳ್ಳಬೇಕಾಗಿಲ್ಲ. ಪಕ್ಷಿಗಳು ತಿಂದು ಉಳಿದ ಹಣ್ಣುಗಳನ್ನು ಮಾತ್ರ ತಿನ್ನಬಾರದು.ಯಾವುದೇ ಹಣ್ಣುಗಳನ್ನು ತಿನ್ನಬಾರದು ಎನ್ನುವುದು ಸರಿಯಲ್ಲ. ಈ ಸೋಂಕು, ರೋಗ ಪೀಡಿತ ಪ್ರಾಣಿಗಳಿಂದ, ಬಾವಲಿಯಂತಹ ಹಕ್ಕಿಗಳ ಜೊಲ್ಲಿನಿಂದ, ಅವುಗಳ ಮಲ ಮೂತ್ರಗಳ ಮೂಲಕ ಮಾನವರ ದೇಹವನ್ನು ಪ್ರವೇಶಿಸಬಹುದು. ನಿಪ್ಹಾ ರೋಗ ಪೀಡಿತರು ಕೆಮ್ಮುವಾಗ ಅವರು ಬಳಸಿದ ವಸ್ತುಗಳನ್ನು ಉಪಯೋಗಿಸುವ ಮೂಲಕ ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು. ಆದುದರಿಂದ ಈ ರೀತಿಯ ಶಂಕಿತ ಪ್ರಕರಣಗಳು ಕಂಡು ಬಂದಾಗ ಅವರನ್ನು ಎಚ್ಚರಿಕೆಯಿಂದ ಆರೈಕೆ ಮಾಡಬೇಕಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.

►ಯಾರಿಗೆ ಸೋಂಕು ತಗುಲಬಹುದು ..?: ನಿಪ್ಹಾ ವೈರಾಣು ರೋಗ ನಿರೊಧಕ ಶಕ್ತಿ ದುರ್ಬಲವಾಗಿರುವ ವ್ಯಕ್ತಿಗೆ ನಿಪ್ಹಾ ಸೋಂಕು ತಗುಲಿದ ವ್ಯಕ್ತಿಯ ಅಥವಾ ಪಕ್ಷಿ,ಪ್ರಾಣಿಗಳ ಸಂಪರ್ಕವಾಗುವ ಮೂಲಕ ಹರಡಬಹುದು ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.

►ಯಾವ ಮುನ್ನೆಚ್ಚರಿಕೆ ವಹಿಸಬೇಕು..?:ಸೋಂಕು ಪೀಡಿತ ಪ್ರಾಣಿಗಳಿಂದ ದೂರ ಇಡಬೇಕಾಗಿದೆ. ಸಾಕು ಪ್ರಾಣಿಗಳನ್ನು ಸಾಕುವ ಪ್ರದೇಶದಲ್ಲಿ ಶುಚಿತ್ವವನ್ನು ಕಾಪಾಡಬೇಕು.ನೀರನ್ನು ಕುದಿಸಿ ಆರಿಸಿ ಕುಡಿಯಬೇಕು. ಹಣ್ಣುಗಳನ್ನು ತೊಳೆದು ಶುಚಿಯಾಗಿ ಬಳಸಬೇಕು. ವ್ಯಕ್ತಿ ಅಥವಾ ಪ್ರಾಣಿಗಳಲ್ಲಿ ನಿಪ್ಹಾ ರೋಗದ ಲಕ್ಷಣಗಳು ಕಂಡು ಬಂದರೆ ಅದರಿಂದಲೆ ನಿಪ್ಹಾ ರೋಗ ಬಂದಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಶಂಕಿತ ರೋಗಿಯ ಗಂಟಲಿನ ಒಳಗಿನ ದ್ರವದ ಮಾದರಿ, ರಕ್ತದ ಮಾದರಿ, ಮೂತ್ರದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಾತ್ರ ರೋಗ ಖಚಿತ ಪಡಿಸಿಕೊಳ್ಳಬಹುದು ಎಂದು ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ನಿಪ್ಹಾ ರೋಗದ ಲಕ್ಷಣಗಳು: ನಿಪ್ಹಾ ವೈರಸ್‌ನಿಂದ ಹರಡುವ ರೋಗವಾಗಿದ್ದು ಮಿದುಳಿನ ನರವ್ಯೂಹಕ್ಕೆ ಸಂಬಂಧಿಸಿದ ಉರಿಯೂತ ಸಮಸ್ಯೆ, ಶ್ವಾಸಕೋಶದ ತೊಂದರೆ ಉಂಟು ಮಾಡುತ್ತದೆ. ಸೋಂಕು ತಗುಲಿದ ವ್ಯಕ್ತಿಗೆ 5ರಿಂದ 15 ದಿನಗಳಲ್ಲಿ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ, ತಲೆನೋವು , ನರ ದೌರ್ಬಲ್ಯ, ಮಾನಸಿಕ ದಿಗ್ಭ್ರಮೆ, ಗೊಂದಲ, ಅರೆ ನಿದ್ರಾವಸ್ಥೆ ಕಂಡು ಬಂದು ರೋಗ ಪೀಡಿತ ವ್ಯಕ್ತಿ ಕೋಮಾ ಸ್ಥಿತಿಗೂ ತಲುಪಬಹುದು. ಸೋಂಕಿಗೆ ತುತ್ತಾದ ವ್ಯಕ್ತಿ ಬದುಕುಳಿದರೂ ರೋಗ ದೀರ್ಘ ಕಾಲೀನ ಪರಿಣಾಮ ಉಂಟು ಮಾಡಬಹುದು.ರೋಗ ಹರಡದಂತೆ ಮತ್ತು ದೇಹದ ರೋಗ ನಿರೊಧಕ ಶಕ್ತಿ ದುರ್ಬಲಗೊಳ್ಳದಂತೆ ಎಚ್ಚರವಹಿಸಬೇಕು ಎಂದು ರಾಮಕೃಷ್ಣ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News