ಡಾ.ಕಫೀಲ್ ಖಾನ್ ಮನವಿಗೆ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದು ಹೀಗೆ

Update: 2018-05-22 12:26 GMT

ಕೊಚ್ಚಿ, ಮೇ 22: ಕೇರಳದಲ್ಲಿ ನಿಪ್ಹಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ತನಗೆ ಸೇವೆ ಸಲ್ಲಿಸುವ ಅವಕಾಶ ನೀಡಬೇಕೆಂದು ಡಾ.ಕಫೀಲ್ ಖಾನ್ ಮಾಡಿದ್ದ ಮನವಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಂದಿಸಿದ್ದಾರೆ.

ಕಫೀಲ್‍ ಖಾನ್ ಬರುವುದಿದ್ದರೆ ಸಂತೋಷ. ಅವರನ್ನು ಸ್ವಾಗತಿಸುವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ.

"ಫಜ್ರ್ ನಮಾಝ್ ಬಳಿಕ ನಿದ್ದೆ ಬಂದಿಲ್ಲ. ನಿಪ್ಹಾ ವೈರಸ್‍ನಿಂದಾದ ಸಾವುಗಳು ನನ್ನನ್ನು ಕಾಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿನ ವದಂತಿಗಳು ಆತಂಕ ಸೃಷ್ಟಿಸಿವೆ. ನನಗೆ ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರಲ್ಲಿ ವಿನಂತಿಸುತ್ತಿರುವೆ. ಸಿಸ್ಟರ್ ಲಿನಿ ನಮ್ಮ ಪ್ರೇರಣೆಯಾಗಿದ್ದಾರೆ. ಸೇವೆಗಾಗಿ ನನ್ನ ಜೀವನವನ್ನು ಮುಡಿಪಾಗಿಡಲು ಸಿದ್ಧ" ಎಂದು ಕಫೀಲ್ ಖಾನ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು.

ಇದಕ್ಕೆ ಸ್ಪಂದಿಸಿದ ಪಿಣರಾಯಿ ವಿಜಯನ್,  "ಕಲ್ಲಿಕೋಟೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ತಾನು ಸಿದ್ಧನಿದ್ದೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಕೆಂದು  ಮನವಿ ಮಾಡಿದ ಉತ್ತರ ಪ್ರದೇಶದ ವೈದ್ಯ ಡಾ. ಕಫೀಲ್ ಖಾನ್‍ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಿದ ಮನವಿ ನೋಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸ್ವಂತ ಜೀವ, ಆರೋಗ್ಯವನ್ನು ಪರಿಗಣಿಸದೆ ಅರ್ಪಣಾಮನೋಭಾವದಲ್ಲಿ ಸೇವೆ ಸಲ್ಲಿಸುವ ಧಾರಾಳ ವೈದ್ಯರಿದ್ದಾರೆ. ಅವರಲ್ಲಿ ಒಬ್ಬರೆಂದು ನಾನು ಕಫೀಲ್ ಖಾನ್‍ರನ್ನು ಭಾವಿಸಿದ್ದೇನೆ. ಡಾ.ಕಫೀಲ್ ಖಾನ್‍ರಂತಹವರಿಗೆ ಕೇರಳದಲ್ಲಿ ಕೆಲಸ ಮಾಡಲು ಅವಕಾಶ ನೀಡಲು ಸರಕಾರಕ್ಕೆ ಸಂತೋಷವಿದೆ" ಎಂದಿದ್ದಾರೆ.

"ಇಂತಹ ವೈದ್ಯರು ಮತ್ತು ತಜ್ಞರು ಆರೋಗ್ಯ ಇಲಾಖೆ ನಿರ್ದೇಶಕರನ್ನು, ಅಥವಾ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆ ಸುಪರಿಡೆಂಟ್‍ರನ್ನು ಸಂಪರ್ಕಿಸಬೇಕೆಂದು ಮನವಿ ಮಾಡುತ್ತೇನೆ. ರಾಜ್ಯದ ಹೊರಗೆ ಕೆಲಸಮಾಡುವ ಕೇರಳದ ಕೆಲವು ತಜ್ಞ ವೈದ್ಯರು ಇಷ್ಟರಲ್ಲೇ ಕಲ್ಲಿಕೋಟೆಗೆ ಬಂದಿದ್ದಾರೆ. ಅವರಿಗೆಲ್ಲ ಕೇರಳ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ" ಎಂದು ಪಿಣರಾಯಿ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News