ಉದ್ದೇಶಿತ ‘ಇಸ್ಲಾಮಿಕ್ ಭಯೋತ್ಪಾದನೆ’ ಕೋರ್ಸ್ ಕುರಿತು ಜೆಎನ್‌ಯುಗೆ ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ನೋಟಿಸ್

Update: 2018-05-22 14:29 GMT

ಹೊಸದಿಲ್ಲಿ,ಮೇ 22: ‘ಇಸ್ಲಾಮಿಕ್ ಭಯೋತ್ಪಾದನೆ’ ಕುರಿತು ಕೋರ್ಸ್ ಆರಂಭಿಸುವ ಉದ್ದೇಶದ ಹಿಂದಿನ ಕಾರಣವನ್ನು ತಿಳಿಸುವಂತೆ ಕೋರಿ ಜವಾಹರಲಾಲ ನೆಹರು ವಿವಿ (ಜೆಎನ್‌ಯು)ಯ ರಿಜಿಸ್ಟ್ರಾರ್‌ಗೆ ದಿಲ್ಲಿ ಅಲ್ಪಸಂಖ್ಯಾತರ ಆಯೋಗ(ಡಿಎಂಸಿ)ವು ಮಂಗಳವಾರ ನೋಟಿಸ್‌ನ್ನು ಹೊರಡಿಸಿದೆ.

ಉದ್ದೇಶಿತ ಕೋರ್ಸ್‌ನ ಕುರಿತು ವರದಿಗಳನ್ನು ಆಯೋಗವು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದು, ಯಾವ ಆಧಾರದಲ್ಲಿ ವಿವಿಯು ಈ ಕೋರ್ಸ್‌ನ್ನು ಆರಂಭಿಸುತ್ತಿದೆ ಎನ್ನುವುದನ್ನು ವಿವರಿಸುವಂತೆ ರಿಜಿಸ್ಟ್ರಾರ್‌ಗೆ ಸೂಚಿಸಿದೆ ಎಂದು ಡಿಎಂಸಿ ಅಧ್ಯಕ್ಷ ಝಫರುಲ್ ಇಸ್ಲಾಂ ಖಾನ್ ಅವರು ತಿಳಿಸಿದರು.

‘ಇಸ್ಲಾಮಿಕ್ ಭಯೋತ್ಪಾದನೆ’ ಕುರಿತು ಕೋರ್ಸ್‌ನ್ನು ಆರಂಭಿಸಲು ರಾಷ್ಟ್ರೀಯ ಭದ್ರತಾ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾಪವೊಂದನ್ನು ಜೆಎನ್‌ಯು ಶೈಕ್ಷಣಿಕ ಮಂಡಳಿಯು ಅಂಗೀಕರಿಸಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಪ್ರೊಫೆಸರ್ ಓರ್ವರು ಕಳೆದ ವಾರ ಹೇಳಿದ್ದರು.

ಇಂತಹ ಪ್ರಸ್ತಾಪವಿದೆಯೇ ಎನ್ನುವುದನ್ನು ತಿಳಿಸುವಂತೆ ಮತ್ತು ಅದರ ಪ್ರತಿಯನ್ನು ತನಗೆ ಸಲ್ಲಿಸುವಂತೆ ಡಿಎಂಸಿಯು ತನ್ನ ನೋಟಿಸ್‌ನಲ್ಲಿ ತಿಳಿಸಿದೆ.

 ಕ್ಯಾಂಪಸ್‌ನಲ್ಲಿ ಇಂತಹ ಕೋರ್ಸ್‌ನ್ನು ಆರಂಭಿಸುವುದರಿಂದ ತನ್ನ ವಿದ್ಯಾರ್ಥಿಗಳು ಮತ್ತು ಹೊರಗಿನ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳನ್ನು ಜೆಎನ್‌ಯುದ ಈಗಿನ ಆಡಳಿತವು ಪರಿಗಣಿಸಿದೆಯೇ ಎಂದೂ ಡಿಎಂಸಿಯು ಪ್ರಶ್ನಿಸಿದೆ.

 ಕೋರ್ಸ್‌ನ ಕುರಿತು ಸಂಪೂರ್ಣ ವಿವರಗಳನ್ನು,ಶೈಕ್ಷಣಿಕ ಮಂಡಳಿ ಸಭೆಯ ನಡಾವಳಿಗಳನ್ನು ಮತ್ತು ಅದರಲ್ಲಿ ಭಾಗವಹಿಸಿದ್ದ ಸದಸ್ಯರ ಪಟ್ಟಿಯನ್ನು ಉತ್ತರದೊಂದಿಗೆ ಜೂ.5ರೊಳಗೆ ಸಲ್ಲಿಸುವಂತೆ ಜೆಎನ್‌ಯುಗೆ ಸೂಚಿಸಲಾಗಿದೆ ಎಂದು ಖಾನ್ ತಿಳಿಸಿದರು.

ಜೆಎನ್‌ಯುದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕೆಲವು ವರ್ಗಗಳು ಉದ್ದೇಶಿತ ಕೋರ್ಸ್‌ನ್ನು ವಿರೋಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News