ಭಾರತದಿಂದ ಸಿಂಧೂ ನದಿ ನೀರು ಒಪ್ಪಂದ ಉಲ್ಲಂಘನೆ: ವಿಶ್ವಬ್ಯಾಂಕ್‌ಗೆ ಪಾಕಿಸ್ತಾನ ದೂರು

Update: 2018-05-22 15:13 GMT

ವಾಶಿಂಗ್ಟನ್, ಮೇ 22: ಕಾಶ್ಮೀರದಲ್ಲಿ ಕಿಶನ್‌ಗಂಗಾ ಜಲ ವಿದ್ಯುತ್ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನವು ವಿಶ್ವಬ್ಯಾಂಕ್‌ಗೆ ದೂರು ನೀಡಿದೆ.

 ಅದೇ ವೇಳೆ, ವಿವಾದಕ್ಕೆ ಸೌಹಾರ್ದಯುತ ಪರಿಹಾರವೊಂದನ್ನು ಕಂಡುಹಿಡಿಯಲು ಒಪ್ಪಂದದಲ್ಲೇ ಇರುವ ಅವಕಾಶಗಳ ಬಳಕೆಗೆ ಮುಂದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 330 ಮೆಗಾವ್ಯಾಟ್ ಕಿಶನ್‌ಗಂಗಾ ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಿರುವುದನ್ನು ಸ್ಮರಿಸಬಹುದಾಗಿದೆ.

ಇದರ ಬೆನ್ನಿಗೇ, ಅಟಾರ್ನಿ ಜನರಲ್ ಅಶ್ತಾರ್ ಔಸಫ್ ಅಲಿ ನೇತೃತ್ವದ ನಾಲ್ವರು ಸದಸ್ಯರ ಪಾಕಿಸ್ತಾನಿ ನಿಯೋಗವು ಇಲ್ಲಿ ಸೋಮವಾರ ವಿಶ್ವಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿತು.

ಪಾಕಿಸ್ತಾನದ ಪ್ರತಿಭಟನೆಯ ನಡುವೆಯೇ, ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಾಗಿತ್ತು. ಪಾಕಿಸ್ತಾನಕ್ಕೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟು ನೀರಿನ ಹರಿವಿಗೆ ತಡೆಯೊಡ್ಡುತ್ತದೆ ಎಂದು ಪಾಕಿಸ್ತಾನ ಹೇಳಿದೆ.

ಜಲವಿದ್ಯುತ್ ಯೋಜನೆಯ ವಿನ್ಯಾಸದ ಬಗ್ಗೆ ಪಾಕಿಸ್ತಾನ ಆಕ್ಷೇಪವೆತ್ತಿದೆ. ಇದು ಎರಡು ದೇಶಗಳ ನಡುವೆ ಏರ್ಪಟ್ಟ ಒಪ್ಪಂದ ಅಂಶಗಳಿಗೆ ಅನುಗುಣವಾಗಿಲ್ಲ ಎಂದು ಅದು ಹೇಳಿದೆ.

ಆದರೆ, ಯೋಜನೆಯ ವಿನ್ಯಾಸವು ಒಪ್ಪಂದದ ಚೌಕಟ್ಟಿನ ಒಳಗೆಯೇ ಇದೆ ಎಂದು ಭಾರತ ಹೇಳಿದೆ.

ಮಹತ್ವದ ಒಪ್ಪಂದ: ವಿಶ್ವಬ್ಯಾಂಕ್

‘‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವು ಅತ್ಯಂತ ಮಹತ್ವದ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ. ಮಾನವ ಅಗತ್ಯವನ್ನು ಪೂರೈಸುವ ಹಾಗೂ ಅಭಿವೃದ್ಧಿ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ನೀರು ನಿರ್ವಹಣೆಯ ಅವಕಾಶವನ್ನು ಒಪ್ಪಂದವು ಭಾರತ ಮತ್ತು ಪಾಕಿಸ್ತಾನಗಳಿಗೆ ನೀಡುತ್ತದೆ’’ ಎಂದು ವಿಶ್ವಬ್ಯಾಂಕ್‌ನ ವಕ್ತಾರರೋರ್ವರು ಪಿಟಿಐಗೆ ತಿಳಿಸಿದರು.

ವಿಶ್ವಬ್ಯಾಂಕ್ ಮತ್ತು ಪಾಕಿಸ್ತಾನಿ ನಿಯೋಗದ ನಡುವಿನ ಮಾತುಕತೆ ಬುಧವಾರವೂ ಮುಂದುವರಿಯುತ್ತದೆ.

ವಿಶ್ವಬ್ಯಾಂಕ್‌ನ ಮಧ್ಯಸ್ಥಿಕೆಯಲ್ಲಿ ಭಾರತ-ಪಾಕ್ ನಡುವಿನ ಈ ಒಪ್ಪಂದವು ಏರ್ಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News