ಕುಠೀರದೊಳಗಡೆ ಕುಡಿಯುವ ನೀರು : ವಿದ್ಯಾರ್ಥಿ ಸಂಘಟನೆಯ ಸೇವಾ ಕಾರ್ಯ

Update: 2018-05-22 17:54 GMT

ಪುತ್ತೂರು,ಮೇ 22: ಬೇಸಿಗೆಯಲ್ಲಿ ಬಾಯಾರಿದ ದೇಹಕ್ಕೆ ಎಲ್ಲಾದರೂ ಕುಡಿಯಲು ನೀರು ಸಿಕ್ಕಿದಾಗ ಆಗುವ ಸಂತೃಪ್ತಿಯನ್ನು ವರ್ಣಿಸಲು ಅಸಾಧ್ಯ. ಪೇಟೆ ಪಟ್ಟಣಗಳಲ್ಲಿ ಅಂಗಡಿಗಳಲ್ಲಿ ಹಣ ನೀಡಿ ಬಾಟಲಿ ನೀರನ್ನು ಕುಡಿದು ದಾಹ ತಣಿಸಬಹುದು. ಅದರೆ ಗ್ರಾಮೀಣ ಪ್ರದೇಶಗಳಲ್ಲಿ ವಾಹನದಲ್ಲಿ ಆಗಮಿಸುವವರು ಮತ್ತು ರಸ್ತೆ ಪಾದಾಚಾರಿಗಳಿಗೆ ಅಂತಹ ವ್ಯವಸ್ಥೆಗಳು ಸಿಗುವುದು ಕಡಿಮೆ. ಇದನ್ನು ಮನಗಂಡ ಕುಂಬ್ರದ ವಿದ್ಯಾರ್ಥಿ ಸಂಘಟನೆಯೊಂದು ಸಾರ್ವಜನಿಕ ಸ್ಥಳದಲ್ಲಿ ಕುಠೀರವೊಂದನ್ನು ನಿರ್ಮಿಸಿ ಅದರಲ್ಲಿ ಮಣ್ಣಿನ ಗೂಜೆಯನ್ನು ಇಟ್ಟು ಶುದ್ದ ನೀರು ವಿತರಿಸುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. 

ಕುಂಬ್ರದಲ್ಲಿನ ಕರ್ನಾಟಕ ಇಸ್ಲಾಮಿಕ್ ಸೆಂಟರ್(ಕೆಐಸಿ) ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ಮೂಲಕ ಬಾಯಾರಿದವರ ದಾಹ ತಣಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಕೆಐಸಿ ಬಡ ಹಾಗೂ ಅನಾಥ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ. 
ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಬದಿಯಲ್ಲಿ, ಸಂಸ್ಥೆಯ ಪಕ್ಕದಲ್ಲಿಯೇ ವಿದ್ಯಾರ್ಥಿಗಳು ಸೇರಿಕೊಂಡು ಮುಳಿಹುಲ್ಲಿನ ಕುಟೀರವೊಂದನ್ನು ನಿರ್ಮಿಸಿದ್ದಾರೆ. ಅದರಲ್ಲಿ ಮಣ್ಣಿನ ಹೂಜಿಯನ್ನು ಇಟ್ಟು ನೀರು ತುಂಬಿಸಿಡುತ್ತಿದ್ದಾರೆ. ಸಾರ್ವಜನಿಕರು ಇಲ್ಲಿ ಬಂದು ನೀರು ಕುಡಿಯುತ್ತಾರೆ. ಪ್ರತಿ 2 ಗಂಟೆಗೊಮ್ಮೆ ಹೂಜಿಯನ್ನು ಪರಿಶೀಲನೆ ನಡೆಸಿ ನೀರು ಖಾಲಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಖಾಲಿಯಾದ ತಕ್ಷಣ ಮತ್ತೆ ತುಂಬಿಸಿ ಸಾರ್ವಜನಿಕರಿಗೆ ಅನುಕೂಲವನ್ನು ಕಲ್ಪಿಸುತ್ತಿದ್ದಾರೆ.  

ತಂಪಿಗಾಗಿ ಮಣ್ಣಿನ ಹೂಜಿ
ಸ್ಟೀಲ್ ಡ್ರಂ ಅಥವಾ ಇನ್ನಿತರ ಪಾತ್ರೆಗಳಲ್ಲಿ ನೀರು ತುಂಬಿಸಿದರೆ ಬಿಸಿಲಿನ ಉಷ್ಣತೆಗೆ ತುಂಬಿಸಿದ ಕೆಲವೇ ಸಮಯಗಳಲ್ಲಿ ನೀರು ಬಿಸಿಯಾಗುತ್ತದೆ. ಆದರೆ ಮಣ್ಣಿನ ಹೂಜಿಯಲ್ಲಿ ನೀರು ತುಂಬಿಸಿದರೆ ಬಿಸಿಲಿನ ಬೇಗೆ ಎಷ್ಟಿದ್ದರೂ ಅದರೊಳಗೆ ನೀರು ತಂಪಾಗಿರುತ್ತದೆ. ಬಿಸಿಯಾದ ನೀರನ್ನು ಸಾರ್ವಜನಿಕರು ಕುಡಿಯಲು ಬಯಸುವುದಿಲ್ಲ ಎಂಬ ಕಾರಣಕ್ಕೆ ಸದಾ ತಂಪಾಗಿರಿಸುವ ಮಣ್ಣಿನ ಹೂಜಿಯನ್ನು ಬಳಸುತ್ತಿದ್ದೇವೆ. ನೈಸರ್ಗಿಕವಾಗಿ ಮತ್ತು ಆರೋಗ್ಯದ ದೃಚ್ಟಿಯಿಂದಲೂ ಮಣ್ಣಿನ ಪಾತ್ರೆ ಉತ್ತಮ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ. 

ಜಲಜಾಗೃತಿ ಗೋಡೆ ಬರೆಹ
ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಜಲಜಾಗೃತಿ ಮೂಡಿಸುವ ಶ್ಲಾಘನೀಯ ಕೆಲಸವನ್ನೂ ಮಾಡುತ್ತಿದ್ದಾರೆ.  ನೀರು ಅಮೂಲ್ಯವಾದುದು ಮಿತವಾಗಿ ಬಳಸಿ, ನೀರು ನಮ್ಮದಲ್ಲ, ಅದು ದೇವರ ಅನುಗ್ರಹವಾಗಿದೆ. ನಾಳೆಯ ಪೀಳಿಗೆಗೂ ನೀರು ಉಳಿಸಿ, ನೀರು ಪೋಲು ಮಾಡುವುದನ್ನು ಪೈಗಂಬರರು ವಿರೋಸಿದ್ದಾರೆ ಎಂಬ ತಮ್ಮ ಕೈ ಬರೆಹದ ಭಿತ್ತಿಫಲಕಗಳನ್ನು ವಿದ್ಯಾ ಸಂಸ್ಥೆಯ ಗೋಡೆಗಳಲ್ಲಿ ಅಂಟಿಸಿ ಜಲಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಈ ಅಭಿಯಾನಕ್ಕೆ ಮತ್ತು ಸಾರ್ವಜನಿಕ ಸೇವೆಗೆ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗಿದೆ.

ವಿದ್ಯಾರ್ಥಿ ಸಂಘಟನೆಯ ಮೂಲಕ ಈ ಸೇವೆಯನ್ನು ಕಳೆದ ಹಲವು ದಿನಗಳಿಂದ ಮಾಡುತ್ತಿದ್ದೇವೆ, ಎಲ್ಲರೂ ಬಂದು ನೀರು ಕುಡಿಯುತ್ತಿದ್ದಾರೆ. ಸಾರ್ವಜನಿಕರ ದಾಹ ತೀರಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡುತ್ತಿದ್ದೇವೆ. ಜೊತೆಗೆ ಜಲಜಾಗೃತಿ ಅಭಿಯಾನವನ್ನು ಸಣ್ಣ ಮಟ್ಟಿನಲ್ಲಿ ಮಾಡುತ್ತಿದ್ದೇವೆ. ನಮ್ಮ ಈ ಕೆಲಸಕ್ಕೆ ಸಾರ್ವಜನಿಕರಿಂದ ಸದಾ ಸಹಕಾರ ದೊರೆಯುತ್ತಿದೆ. 
ಸತ್ತಾರ್ ಕೌಸರಿ, ಗೌರವಾಧ್ಯಕ್ಷರು , ಅಲ್‍ಕೌಸರಿ ಸ್ಟೂಡೆಂಟ್ ಎಸೋಸಿಯೇಶನ್


ಈ ಹಿಂದೆ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಸಾರ್ವಜನಿಕ ನಳ್ಳಿ ಇರುತ್ತಿತ್ತು ಈಗ ನಳ್ಳಿ ನೀರಿನ ವ್ಯವಸ್ಥೆಯಿಲ್ಲ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಎಲ್ಲಿಯೂ ಇಲ್ಲದ ಕಾರಣ ಸಾರ್ವಜನಿಕರಿಗೆ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಇಂಥಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾಡಿರುವ ಸಣ್ಣ ಕೆಲಸ ದೊಡ್ಡ ಪ್ರಯೋಜನಕಾರಿ ಮತ್ತು ಪುಣ್ಯದಾಯಕವಾಗಿದೆ. ಇದೇ ರೀತಿಯ ವ್ಯವಸ್ಥೆ ಅಲ್ಲಲ್ಲಿ ಮಾಡಿದರೆ ಸಾರ್ವಜನಿಕರಿಗೆ ಪ್ರಯೋಜನವಾಗಬಹುದು.
ಬಶೀರ್ ಕೌಡಿಚ್ಚಾರ್, ಸಮಾಜಸೇವಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News