ಕಾಶ್ಮೀರ : ಸೇನಾಪಡೆ ಹಮ್ಮಿಕೊಂಡ ಇಫ್ತಾರ್ ಕೂಟದಲ್ಲಿ ಘರ್ಷಣೆ

Update: 2018-05-22 17:56 GMT

ಶ್ರೀನಗರ, ಮೇ 22: ಸದ್ಭಾವನೆಯ ಸಂಕೇತವಾಗಿ ಜಮ್ಮು ಮತ್ತು ಕಾಶ್ಮೀರದ ಗ್ರಾಮವೊಂದರಲ್ಲಿ ಸೇನಾಪಡೆ ಆಯೋಜಿಸಿದ ಇಫ್ತಾರ್ ಪಾರ್ಟಿಯಲ್ಲಿ ಘರ್ಷಣೆ ಭುಗಿಲೆದ್ದು ಗುಂಡು ಹಾರಾಟ ನಡೆದ ಘಟನೆ ವರದಿಯಾಗಿದೆ. ಘರ್ಷಣೆಯಲ್ಲಿ 15ರಿಂದ 17 ವರ್ಷದ ನಾಲ್ವರು ಹುಡುಗಿಯರಿಗೆ ಗುಂಡೇಟು ತಗುಲಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಪಿಯನ್ ಜಿಲ್ಲೆಯ ಡಿಕೆ ಪೋರಾ ಗ್ರಾಮದಲ್ಲಿ ಸೇನೆಯು ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಆದರೆ ಸೇನೆಯು ಕೊಡಮಾಡಿದ್ದ ಬಿರಿಯಾನಿಯನ್ನು ಸ್ವೀಕರಿಸಲು ಸ್ಥಳೀಯರು ನಿರಾಕರಿಸಿದ್ದು ಈ ವೇಳೆ ಕೆಲವು ಕಿಡಿಗೇಡಿಗಳು ಯೋಧರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಆಗ ಯೋಧರು ಗುಂಡು ಹಾರಿಸಿದ್ದು ನಾಲ್ವರಿಗೆ ಗುಂಡೇಟು ತಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ದುರದೃಷ್ಟಕರ ಘಟನೆಯಾಗಿದೆ. ಸೇನಾಪಡೆಯು ಸದ್ಭಾವನೆಯ ಸೂಚಕವಾಗಿ ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ನನ್ನ ಪ್ರಕಾರ ಇಫ್ತಾರ್ ಕೂಟವನ್ನು ಸೇನಾ ಶಿಬಿರದೊಳಗೆ ಆಯೋಜಿಸಬೇಕಿತ್ತು ಎಂದು ಜಮ್ಮು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್.ಪಿ.ವೈದ್ ಹೇಳಿದ್ದಾರೆ. ಸ್ಥಳೀಯರು ಭದ್ರತಾ ಪಡೆಗಳ ವಿರುದ್ಧ ತಿರುಗಿಬೀಳುವ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಇಫ್ತಾರ್ ಕೂಟಗಳನ್ನು ಆಯೋಜಿಸದಂತೆ ಸೇನಾಪಡೆಗೆ ಸಲಹೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದ ಹಲವೆಡೆ ಭದ್ರತಾ ಪಡೆ ಹಾಗೂ ಸ್ಥಳೀಯರ ನಡುವಿನ ಸಂಬಂಧ ಅತ್ಯಂತ ಕನಿಷ್ಟ ಮಟ್ಟಕ್ಕೆ ತಲುಪಿದೆ. ಭದ್ರತಾ ಪಡೆಗಳು ಭಯೋತ್ಪಾದಕರ ವಿರುದ್ಧ ಎನ್‌ಕೌಂಟರ್ ನಡೆಸುತ್ತಿದ್ದಾಗಲೂ ಸ್ಥಳೀಯರು ಭದ್ರತಾ ಪಡೆಗಳ ಕಾರ್ಯಕ್ಕೆ ಅಡ್ಡಿಯುಂಟು ಮಾಡಿದ ಘಟನೆಗಳು ನಡೆದಿವೆ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಜಮ್ಮುವಿನ ಪೊಲೀಸ್, ಅರೆಸೇನಾ ಪಡೆ ಹಾಗೂ ಸೇನಾ ಶಿಬಿರಗಳ ಮೇಲೆ ಹಲವಾರು ದಾಳಿ ನಡೆದಿದ್ದು ಸ್ಥಳೀಯರ ವಿಶ್ವಾಸ ಗಳಿಸಿಕೊಳ್ಳುವುದು ಭದ್ರತಾ ಪಡೆಗಳಿಗೆ ಒಂದು ಸವಾಲಿನ ಕೆಲಸವಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News