ಗುಜರಾತ್: ಹೆಸರಿಗೆ ಮೇಲ್ಜಾತಿಯ 'ಉಪನಾಮೆ' ಸೇರಿಸಿದ್ದಕ್ಕೆ ದಲಿತ ಯುವಕನಿಗೆ ಹಲ್ಲೆ

Update: 2018-05-23 14:22 GMT

ಅಹ್ಮದಾಬಾದ್, ಮೇ 23: ಜಿಲ್ಲೆಯ ಧೊಲ್ಕಾ ಪಟ್ಟಣದಲ್ಲಿ 'ಸಿನ್ಹ್' ಎಂಬ ಉಪನಾಮೆಯನ್ನು ಹೆಸರಿನ ಜತೆ ಬಳಸುವ ವಿಚಾರವಾಗಿ ದಲಿತ ಮತ್ತು ಮೇಲ್ಜಾತಿಯವರ ನಡುವೆ ಸಂಘರ್ಷ ನಡೆದಿದೆ. 

'ಸಿನ್ಹ್' ಉಪನಾಮೆಯನ್ನು ಸಂಪ್ರದಾಯದಂತೆ ರಾಜ್ಯದಲ್ಲಿ ಕ್ಷತ್ರಿಯರು ತಮ್ಮ ಹೆಸರಿನ ಜತೆ ಜೋಡಿಸುತ್ತಾರೆ. ಪೊಲೀಸರು ಈ ಸಂಘರ್ಷದ ಸಂಬಂಧ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಎರಡು  ಪ್ರಕರಣಗಳು ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿದ್ದರೆ ಇನ್ನೊಂದು ಪ್ರಕರಣ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಗೊಳಿಸಿದ್ದಕ್ಕೆ  ಸಂಬಂಧಿಸಿದ್ದಾಗಿದೆ. ಈ ಘಟನೆಯ ನಂತರ ಪಟ್ಟಣದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲದೇ ಇದ್ದರೂ ಎರಡೂ ಗುಂಪುಗಳು ಪರಸ್ಪರ ದೂರು, ಪ್ರತಿ ದೂರು ದಾಖಲಿಸಿವೆ.

ಇಪ್ಪತ್ತೆರಡು ವರ್ಷದ ದಲಿತ ಯುವಕ ಮೌಲಿಕ್ ಜಾಧವ್ ತನ್ನ ಹೆಸರಿಗೆ 'ಸಿನ್ಹ್' ಸೇರಿಸಿ ತನ್ನ ಫೇಸ್ ಬುಕ್ ಪುಟದಲ್ಲಿ ಹಾಕಿದ್ದೇ ಮೇಲ್ಜಾತಿಯ ದರ್ಬಾರ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿಯೇ  ಗುಂಪುಗಳು ಪರಸ್ಪರ ದೋಷಾರೋಪದಲ್ಲಿ ತೊಡಗಿದ್ದವು. ಆದರೆ ಮಂಗಳವಾರ ಮೇಲ್ಜಾತಿಗೆ ಸೇರಿದವರೆನ್ನಲಾದ ಕೆಲವರು ಜಾಧವ್ ಮನೆಗೆ ನುಗ್ಗಿ ಆತನಿಗೆ ಹಲ್ಲೆ ನಡೆಸಿದ್ದೇ ತಡ ದಲಿತರ ಗುಂಪೊಂದು ದರ್ಬಾರ್ ಸಮುದಾಯದ ವ್ಯಕ್ತಿಯೊಬ್ಬನ ಮನೆಯಲ್ಲಿ ದಾಂಧಲೆಗೈದಿತ್ತು.

ಮಕ್ಕಳಿಗೆ ಟ್ಯೂಷನ್ ತರಗತಿಗಳನ್ನು ನಡೆಸುವ ಜಾಧವ್  ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದ ಶಾಸಕ ಜಿಗ್ನೇಶ್ ಮೇವಾನಿ ಬೆಂಬಲಿಗನಾಗಿದ್ದಾನೆ. ಕೆಲವು ಮಂದಿ ಕಾರಿನಲ್ಲಿ ಬಂದು ತನ್ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾಗಿ ನಂತರ ಮನೆಯ ಮೇಲೂ ದಾಳಿ ನಡೆಸಿದ ಪರಿಣಾಮ ಕುಟುಂಬದ ಇನ್ನೊಬ್ಬ ಸದಸ್ಯನಿಗೂ ಗಾಯಗಳುಂಟಾಗಿವೆ ಎಂದು ಆತ ಆರೋಪಿಸಿದ್ದಾನೆ.

ತಾನು ತನ್ನ ಫೇಸ್ ಬುಕ್ ಪುಟದಲ್ಲಿ ತನ್ನ ಹೆಸರನ್ನು ಮೌಲಿಕ್ ನಿಂದ ಮೌಲಿಕ್ ಸಿನ್ಹ್ ಎಂದು ಬದಲಿಸಿದಂದಿನಿಂದ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆತ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News