ಮೇ 27ರವರೆಗೂ ಉಷ್ಣ ಮಾರುತ ಮುಂದುವರಿಕೆ: ಐಎಂಡಿ

Update: 2018-05-23 14:53 GMT

ಹೊಸದಿಲ್ಲಿ,ಮೇ 23: ಉತ್ತರ ಮತ್ತು ಮಧ್ಯ ಭಾರತಕ್ಕೆ ಬಿಸಿಲಿನ ಧಗೆಯಿಂದ ಈ ವಾರವೂ ಮುಕ್ತಿ ದೊರೆಯುವ ಸಾಧ್ಯತೆ ಕಡಿಮೆ. ಉಷ್ಣ ಮಾರುತ ಮೇ 2ರವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಯು ನಿರೀಕ್ಷಿಸಿದೆ.

ಹರ್ಯಾಣ,ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಿಗಾಗಿ ಮೇ 27ರವರೆಗೆ ಎಚ್ಚರಿಕೆಯನ್ನೂ ಅದು ಹೊರಡಿಸಿದೆ. ಪೂರ್ವ ಉತ್ತರ ಪ್ರದೇಶ,ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರದೇಶಕ್ಕೆ ಗಾಢ ಹಳದಿ ಬಣ್ಣದ ಎಚ್ಚರಿಕೆಯನ್ನು ನೀಡಲಾಗಿದೆ.

 ಐಎಂಡಿಯು ನಾಲ್ಕು ಬಣ್ಣಗಳಲ್ಲಿ ಎಚ್ಚರಿಕೆಯ ಸೂಚನೆಗಳನ್ನು ಹೊರಡಿಸುತ್ತದೆ. ಎಚ್ಚರಿಕೆಯು ಹಸಿರು ಬಣ್ಣದಲ್ಲಿದ್ದರೆ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ಹಳದಿ ಬಣ್ಣದಲ್ಲಿದ್ದರೆ ಪರಿಸ್ಥಿತಿಯ ಮೇಲೆ ನಿಗಾ ಇರಿಸಬೇಕಾಗುತ್ತದೆ. ಗಾಢ ಹಳದಿ ಬಣ್ಣದ ಎಚ್ಚರಿಕೆಯನ್ನು ಹೊರಡಿಸಿದ್ದರೆ ವಿಪರೀತ ಹವಾಮಾನ ಸ್ಥಿತಿಯನ್ನು ಎದುರಿಸಲು ಸರಕಾರಿ ಏಜೆನ್ಸಿಗಳು ಸಜ್ಜಾಗಬೇಕಾಗುತ್ತದೆ ಮತ್ತು ಕೆಂಪುಬಣ್ಣದಲ್ಲಿದ್ದರೆ ಈ ಏಜೆನ್ಸಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

  ಉತ್ತರ ಗುಜರಾತ್ ಪ್ರದೇಶ,ಸೌರಾಷ್ಟ್ರ,ಕಛ್,ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್‌ಗಳ ಒಂದೆರಡು ಭಾಗಗಳಲ್ಲಿಯೂ ಉಷ್ಣ ಮಾರುತ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಇಲಾಖೆಯು ಗುರುವಾರಕ್ಕಾಗಿ ನೀಡಿರುವ ಮುನ್ಸೂಚನೆಯಲ್ಲಿ ತಿಳಿಸಿದೆ.

ಅಲ್ಲದೆ ಉತ್ತರ ಕೇರಳ, ಕರಾವಳಿ ತಮಿಳುನಾಡು, ಪುದುಚೇರಿ, ಕರ್ನಾಟಕ, ಲಕ್ಷದ್ವೀಪ,ಹರ್ಯಾಣ,ಚಂಡಿಗಡ,ದಿಲ್ಲಿ,ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನಗಳಲ್ಲಿ ಅಲ್ಲಲ್ಲಿ ಚಂಡಮಾರುತದ ಪ್ರಭಾವ ಹಾಗೂ ಭಾರೀ ವೇಗದಿಂದ ಗಾಳಿ ಬೀಸುವ ಮತ್ತು ಅರುಣಾಚಲ ಪ್ರದೇಶ,ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ ಎಂದೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News