ಮಧ್ಯಪ್ರದೇಶದ ಎಲ್ಲ 230 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಪಿ ಸ್ಪರ್ಧೆ

Update: 2018-05-23 15:00 GMT

ಲಕ್ನೋ,ಮೇ 23: ಗುಜರಾತ್ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ತನ್ನ ವೈಫಲ್ಯದಿಂದ ಧೃತಿಗೆಡದ ಸಮಾಜವಾದಿ ಪಕ್ಷ(ಎಸ್‌ಪಿ)ವು ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 230 ಸ್ಥಾನಗಳಿಗೆ ಸ್ಪರ್ಧಿಸಲು ಸಜ್ಜಾಗಿದೆ.

 ಪಕ್ಷದ ವರಿಷ್ಠ ಅಖಿಲೇಶ ಯಾದವ್ ಅವರು ಮೇ 18ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದು,ಎಲ್ಲ 230 ಸ್ಥಾನಗಳಿಗ ಪಕ್ಷವು ಸ್ಪರ್ಧಿಸಲಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಸಲ ಸೈಕಲ್(ಎಸ್‌ಪಿ ಚಿಹ್ನೆ) ಮಧ್ಯಪ್ರದೇಶದಲ್ಲಿಯೂ ಸಂಚರಿಸಲಿದೆ ಎಂದು ಪಕ್ಷದ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿಯ 15 ವರ್ಷಗಳ ದುರಾಡಳಿತದಿಂದ ಬಿಡುಗಡೆ ಹೊಂದಲು ಮಧ್ಯಪ್ರದೇಶದ ಜನರಿಗೆ ಎಸ್‌ಪಿ ನೆರವಾಗಲಿದೆ. ನಾವು ಬಿಜೆಪಿಯ ಒಳಸಂಚಿನಿಂದ ಮಧ್ಯಪ್ರದೇಶದ ಜನರ ರಕ್ಷಣೆಗೆ ಪ್ರಯತ್ನಿಸುತ್ತೇವೆ ಮತ್ತು ಅವರಿಗಾಗಿ ಹೋರಾಡುತ್ತೇವೆ ಎಂದು ಅಖಿಲೇಶ್ ಮಧ್ಯಪ್ರದೇಶದಲ್ಲಿ ಬಹಿರಂಗ ಸಭೆಯೊಂದರಲ್ಲಿ ಹೇಳಿದ್ದಾರೆ.

ಬಿಜೆಪಿಯ ದ್ವೇಷ ಮತ್ತು ವಿಭಜಕ ರಾಜಕೀಯವು ಪ್ರಜಾಪ್ರಭುತ್ವದ ಬುನಾದಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಅಭಿವೃದ್ಧಿಯ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದ ಚೌಧರಿ,ಅಖಿಲೇಶ್ರ ಇತ್ತೀಚಿನ ಭೇಟಿಗೆ ಮಧ್ಯಪ್ರದೇಶದ ಜನರು ಅದ್ಭುತವಾಗಿ ಸ್ಪಂದಿಸಿದ್ದಾರೆ ಎಂದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗೆ ಚುನಾವಣಾ ಮೈತ್ರಿಗೆ ಎಸ್‌ಪಿ ಮುಕ್ತ ಮನಸ್ಸು ಹೊಂದಿದೆ,ಆದರೆ ಈ ಬಗ್ಗೆ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಸ್‌ಪಿ ಗುಜರಾತ್‌ನಲ್ಲಿ 182 ಮತ್ತು ಕರ್ನಾಟಕದಲ್ಲಿ 24 ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News