ಜಮ್ಮುವಿನಲ್ಲಿ ಪಾಕ್ ಸೇನೆಯಿಂದ ಶೆಲ್ ದಾಳಿ ನಾಲ್ವರು ನಾಗರಿಕರ ಸಾವು, 30 ಮಂದಿಗೆ ಗಾಯ

Update: 2018-05-23 15:06 GMT

ಜಮ್ಮು, ಮೇ 23: ಜಮ್ಮು ವಲಯದ ಅಂತಾರಾಷ್ಟ್ರೀಯ ಗಡಿಗುಂಟ ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಬಿಎಸ್‌ಎಫ್ ಸಿಬ್ಬಂದಿ ಸೇರಿದಂತೆ 30 ಮಂದಿ ಗಾಯಗೊಂಡಿದ್ದಾರೆ ಇದರೊಂದಿಗೆ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

ಪಾಕಿಸ್ತಾನ ರೇಂಜರ್‌ಗಳು ಕಳೆದ ಒಂದು ವಾರದಿಂದ 195 ಕಿ. ಮೀ. ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದ ಮುಂಚೂಣಿ ಗ್ರಾಮಗಳ ಮೇಲೆ ಶೆಲ್ ಹಾಗೂ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಹಲವು ಕುಟುಂಬಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿವೆ. ‘‘ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಕಥುವಾದಿಂದ ಅಖ್ನೂರು ವರೆಗೆ ಪೂರ್ಣ ರಾತ್ರಿ ಪಾಕಿಸ್ತಾನ ಸೇನೆ ನಡೆಸಿದ ಗುಂಡು ಹಾಗೂ ಶೆಲ್ ದಾಳಿಯಿಂದ ನಾಲ್ವರು ಮೃತಪಟ್ಟಿದ್ದಾರೆ ಹಾಗೂ 30 ಮಂದಿ ಗಾಯಗೊಂಡಿದ್ದಾರೆ. ಇದು ದುಃಖಕರ’’ ಎಂದು ಜುಮ್ಮು ಹಾಗೂ ಕಾಶ್ಮೀರದ ಡಿಜಿಪಿ ಶೇಷ್ ಪೌಲ್ ಹೇಳಿದ್ದಾರೆ. ‘‘ಸಾಂಬಾದ ರಾಮಗಢ ಉಪ ವಲಯದ ಬೈಂಗ್ಲಾರ್ ಗ್ರಾಮದಲ್ಲಿ ಬುಧವಾರ ಸಂಜೆ ಮಗು ಸೇರಿದಂತೆ ಇಬ್ಬರು ಗ್ರಾಮಸ್ಥರು ಮೃತಪಟ್ಟದ್ದಾರೆ. ಆರ್.ಎಸ್. ಪುರದ ಶಮ್ಕಾ ಗ್ರಾಮದಲ್ಲಿ ಓರ್ವ ವ್ಯಕ್ತಿ ಹಾಗೂ ಕಥುವಾದ ಹರಿನಗರ್ ಉಪ ವಲಯದ ಲೋಂಡಿ ಗ್ರಾಮದಲ್ಲಿ ಇನೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರಾಮಗಢ ಉಪ ವಲಯದ ಬಲ್ಲಾರ್ ಠಾಣೆಯಲ್ಲಿ ಗಾಯಗೊಂಡಿರುವ ಮೂವರು ಯೋಧರನ್ನು ರಾಮಗಢ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News