ಉಬೆರ್ ಕಪ್: ಜಪಾನ್ ವಿರುದ್ಧ ಭಾರತಕ್ಕೆ ಸೋಲು

Update: 2018-05-23 18:17 GMT

ಬ್ಯಾಂಕಾಕ್, ಮೇ 23: ಸೈನಾ ನೆಹ್ವಾಲ್ ನೇತೃತ್ವದ ಭಾರತದ ಮಹಿಳಾ ಬ್ಯಾಡ್ಮಿಂಟನ್ ತಂಡ ಉಬೆರ್ ಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಜಪಾನ್ ವಿರುದ್ಧ 0-5 ಅಂತರದಿಂದ ಶರಣಾಗಿದೆ.

ಭಾರತ ಕಳೆದ ಎರಡು ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿತ್ತು. ಆದರೆ, ಅಗ್ರ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಅಶ್ವಿನಿ ಪೊನ್ನಪ್ಪ ಅವರ ಅನುಪಸ್ಥಿತಿಯಲ್ಲಿ ಆಡಿದ ಭಾರತ ಅಗ್ರ ಶ್ರೇಯಾಂಕದ ಜಪಾನ್ ಆಟಗಾರ್ತಿಯರಿಗೆ ಸ್ಪರ್ಧೆಯೊಡ್ಡಲು ವಿಫಲವಾಯಿತು.

ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಸೈನಾ ಅವರು ವಿಶ್ವದ ನಂ.2ನೇ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ದ ಆರಂಭದಲ್ಲಿ ಪ್ರಾಬಲ್ಯ ಮೆರೆದಿದ್ದರು. ಆದರೆ, ಆ ನಂತರ ನಿರಂತರ ತಪ್ಪೆಸಗುವ ಮೂಲಕ ಮುಗ್ಗರಿಸಿದರು. ಸೈನಾ ಅವರು ಯಮಗುಚಿ ವಿರುದ್ಧ 19-21, 21-9, 20-22 ಗೇಮ್‌ಗಳಿಂದ ಸೋತಿದ್ದಾರೆ.

ಡಬಲ್ಸ್ ಜೋಡಿ ಸನಿಯೋಗಿತಾ ಘೋರ್ಪಡೆ ಹಾಗೂ ಪ್ರಜಕ್ತಾ ಸಾವಂತ್ ವಿಶ್ವದ ನಂ.4ನೇ ಆಟಗಾರ್ತಿಯರಾದ ಅಯಾಕಾ ಟಕಹಶಿ ಹಾಗೂ ಮಿಸಾಕಿ ಮಟ್ಸುಟೊಮೊ ವಿರುದ್ಧ 15-21, 6-21 ಗೇಮ್‌ಗಳಿಂದ ಸೋತಿದ್ದಾರೆ.

ವೈಷ್ಣವಿ ರೆಡ್ಡಿ ಕೇವಲ 26 ನಿಮಿಷಗಳಲ್ಲಿ ಕೊನೆಗೊಂಡ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ನೊರೊಮಿ ಒಕುಹರಾ ವಿರುದ್ಧ 10-21, 7-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ದಿನದ ನಾಲ್ಕನೇ ಪಂದ್ಯದಲ್ಲಿ ವೈಷ್ಣವಿ ಭಾಲೆ ಹಾಗೂ ಮೇಘನಾ ಜೋಡಿ 8-21, 17-21 ರಿಂದಲೂ ಅರುಣಾ ಪ್ರಭುದೇಸಾಯಿ 12-21, 7-21 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News