ಗಂಗಾ ಶುದ್ಧೀಕರಣ: ಶೇಕಡಾವಾರು ಪಾಲನಾ ವರದಿ ಸಲ್ಲಿಸಲು ಉತ್ತರಾಖಂಡಕ್ಕೆ ಎನ್‌ಜಿಟಿ ಆದೇಶ

Update: 2018-05-24 14:55 GMT

ಹೊಸದಿಲ್ಲಿ,ಮೇ 24: ಗೋಮುಖ ಮತ್ತು ಹರಿದ್ವಾರಗಳ ನಡುವೆ ಗಂಗಾ ನದಿ ಶುದ್ಧೀಕರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಶೇಕಡಾವಾರು ಪಾಲನಾ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ಗುರುವಾರ ಉತ್ತರಾಖಂಡ ಸರಕಾರವನ್ನು ಆದೇಶಿಸಿದೆ.

ಯಾವ ಕಾಮಗಾರಿಯು ಪ್ರಗತಿಯಲ್ಲಿದೆ ಎನ್ನುವುದನ್ನು ಸೂಚಿಸುವುದರ ಬದಲು ತನ್ನ ವಿವಿಧ ನಿರ್ದೇಶಗಳ ಪಾಲನೆಯ ಹಂತದ ಕುರಿತು ಸ್ಪಷ್ಟವಾದ ಹೇಳಿಕೆಯನ್ನು ನೀಡುವಂತೆ ಪ್ರಭಾರ ಎನ್‌ಜಿಟಿ ಅಧ್ಯಕ್ಷ ಜಾವೇದ್ ರಹೀಂ ಅವರ ನೇತೃತ್ವದ ಪೀಠವು ರಾಜ್ಯ ಸರಕಾರಕ್ಕೆ ಸೂಚಿಸಿತು. ಜು.19ರೊಳಗೆ ಶೇಕಡಾವಾರು ಪಾಲನಾ ವರದಿಯನ್ನು ಸಲ್ಲಿಸುವಂತೆ ಅದು ನಿರ್ದೇಶ ನೀಡಿತು.

ಇದಕ್ಕೂ ಮುನ್ನ,ಉತ್ತರಾಖಂಡ ಸರಕಾರವು ಪಾಲನಾ ವರದಿಯನ್ನು ಸಲ್ಲಿಸಿದೆಯಾದರೂ ನ್ಯಾಯಾಧಿಕರಣದ ವಿವಿಧ ನಿರ್ದೇಶಗಳು ಇನ್ನೂ ಸಂಪೂರ್ಣವಾಗಿ ಪಾಲನೆಯಾಗಬೇಕಿವೆ ಎಂದು ಅದರ ಪರ ವಕೀಲ ವಿಜಯ ಹಂಸಾರಿಯಾ ತಿಳಿಸಿದ್ದರು.

 ವಿಚಾರಣೆಯ ಸದರ್ಭ ಗಂಗಾ ಪುನರುಜ್ಜೀವನಕ್ಕೆ ಕೋರಿ ಅರ್ಜಿಯನ್ನು ಸಲ್ಲಿಸಿರುವ ವಕೀಲ ಎಂ.ಸಿ.ಮೆಹ್ತಾ ಅವರು, ಎನ್‌ಜಿಟಿಯ ನಿರ್ದೇಶಗಳಲ್ಲಿ ಹಲವಾರು ಇತರ ಸರಕಾರಿ ಇಲಾಖೆಗಳನ್ನು ಪ್ರಸ್ತಾಪಿಸಲಾಗಿದ್ದರೂ,ಅಧಿಕಾರಿ ಎಸ್.ಡಿ.ಸಿಂಗ್ ಅವರೇ ಎಲ್ಲ ಅಫಿದಾವತ್ತುಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಬೆಟ್ಟುಮಾಡಿದರು. ತಪ್ಪು ಕಂಡು ಬಂದರೆ ಕಾನೂನಿಗನುಗುಣವಾಗಿ ಸೂಕ್ತ ಕ್ರಮಗಳನ್ನು ತೆಗದುಕೊಳ್ಳಬೇಕಿರು ವುದರಿಂದ ಇತರ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದಂತೆ ಒಬ್ಬರೇ ವ್ಯಕ್ತಿ ಅಫಿದಾವತ್ತುಗಳನ್ನು ಸಲ್ಲಿಸುತ್ತಿರುವುದು ನ್ಯಾಯಾಧಿಕರಣದ ಆದೇಶಗಳಿಗೆ ಅನುಗುಣವಾಗಿಲ್ಲ ಎಂದು ಅವರು ವಾದಿಸಿದರು.

ಸಿಂಗ್ ಅವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು,ಅವರ ಹೇಳಿಕೆಗಳಿಗೆ ತಾನು ಬದ್ಧವಾಗಿರುವುದಾಗಿ ಉತ್ತರಾಖಂಡ ಸರಕಾರವು ತಿಳಿಸಿತು.

ಯಾವುದೇ ತಪ್ಪು ಕಂಡು ಬಂದರೆ ಸಿಂಗ್ ಅವರು ಸಲ್ಲಿಸಿರುವ ಅಫಿದಾವತ್ತನ್ನು ರಾಜ್ಯ ಕಾರ್ಯದರ್ಶಿ ಸಲ್ಲಿಸಿರುವ ಅಫಿದಾವತ್ ಎಂದು ಪರಿಗಣಿಸಲಾಗುವುದು ಮತ್ತು ಎಲ್ಲ ಕ್ರಮಗಳಿಗೆ ಅವರೇ ಗುರಿಯಾಗುತ್ತಾರೆ ಎಂದು ಪೀಠವು ಸ್ಪಷ್ಟಪಡಿಸಿತು.

ಗೋಮುಖ ಮತ್ತು ಉನ್ನಾವೋ ನಡುವೆ ಗಂಗಾನದಿಯ ಶುದ್ಧೀಕರಣಕ್ಕಾಗಿ ಕೇಂದ್ರ,ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರಕಾರಗಳು ಕೈಗೊಂಡಿರುವ ಕ್ರಮಗಳ ಕುರಿತು ಪಾಲನಾ ವರದಿಯನ್ನು ಸಲ್ಲಿಸದ್ದಕ್ಕೆ ಎನ್‌ಜಿಟಿಯು ಈ ಹಿಂದೆ ರಾಷ್ಟ್ರೀಯ ಗಂಗಾ ಶುದ್ಧೀಕರಣ ಅಭಿಯಾನ(ಎನ್‌ಎಮ್‌ಸಿಜಿ)ವನ್ನು ತರಾಟೆಗೆತ್ತಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News