×
Ad

ಚೀನಾದಲ್ಲಿ ಅಮೆರಿಕ ಉದ್ಯೋಗಿಯ ಮೇಲೆ ‘ಸಾನಿಕ್’ ದಾಳಿ?

Update: 2018-05-24 22:07 IST

ವಾಶಿಂಗ್ಟನ್, ಮೇ 25: ಚೀನಾದಲ್ಲಿರುವ ಅಮೆರಿಕ ಸರಕಾರದ ಉದ್ಯೋಗಿಯೊಬ್ಬರ ಮೇಲೆ ‘ಸಾನಿಕ್’ (ಅತಿ ತೀಕ್ಷ್ಣ ಶಬ್ದ) ದಾಳಿ ನಡೆದಿದೆಯೆನ್ನಲಾದ ಘಟನೆಯ ಹಿನ್ನೆಲೆಯಲ್ಲಿ, ಆ ದೇಶದಲ್ಲಿರುವ ತನ್ನ ಉದ್ಯೋಗಿಗಳಿಗೆ ಅಮೆರಿಕ ವಿದೇಶಾಂಗ ಇಲಾಖೆಯು ಆರೋಗ್ಯ ಎಚ್ಚರಿಕೆಯೊಂದನ್ನು ಹೊರಡಿಸಿದೆ.

ಈ ‘ಸೋನಿಕ್’ ದಾಳಿಯಿಂದ ಉದ್ಯೋಗಿಯ ಮೆದುಳಿನ ಮೇಲೆ ಲಘು ಆಘತವಾಗಿದೆ ಎನ್ನಲಾಗಿದೆ.

ಈ ದಾಳಿಗೂ, ಕ್ಯೂಬಾದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿ ಸಿಬ್ಬಂದಿಯ ಮೇಲೆ ಹಿಂದೆ ನಡೆದ ದಾಳಿಗೂ ಸಾಮ್ಯತೆ ಇದೆಯೆನ್ನಲಾಗಿದೆ.

ಈ ವರದಿಯನ್ನು ತಾನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಅಮೆರಿಕದ ಟ್ರಂಪ್ ಸರಕಾರ, ಚೀನಾ ಅಧಿಕಾರಿಗಳ ಬಳಿ ಪ್ರಸ್ತಾಪಿಸಿದೆ.

‘‘ಚೀನಾದಲ್ಲಿರುವ ಅಮೆರಿಕ ವಿದೇಶಾಂಗ ಇಲಾಖೆಯ ಉದ್ಯೋಗಿಯೋರ್ವರು ಲಘು, ಆದರೆ ವಿಚಿತ್ರ ಶಬ್ದ ಮತ್ತು ಒತ್ತಡವನ್ನು ಅನುಭವಿಸಿದ್ದಾರೆ’’ ಎಂದು ಚೀನಾದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಬುಧವಾರ ಹೇಳಿದೆ.

‘‘ಈ ಸಂವೇದನೆಗಳಿಗೆ ಕಾರಣ ಏನು ಎನ್ನುವುದು ಸದ್ಯಕ್ಕೆ ನಮಗೆ ಗೊತ್ತಿಲ್ಲ ಹಾಗೂ ಚೀನಾದಲ್ಲಿ ಇಂಥ ಘಟನೆಗಳು ಹಿಂದೆ ನಡೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ’’ ಎಂದಿದೆ.

‘ಅಸಾಮಾನ್ಯ ದೈಹಿಕ ಲಕ್ಷಣ’ಗಳಿಂದ ಬಳಲುತ್ತಿದ್ದ ಉದ್ಯೋಗಿ

ಚೀನಾದ ದಕ್ಷಿಣದ ನಗರ ಗ್ವಾಂಗ್‌ಝೂನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯು 2017ರ ಕೊನೆಯ ಭಾಗದಿಂದ 2018 ಎಪ್ರಿಲ್‌ವರೆಗಿನ ಅವಧಿಯಲ್ಲಿ ‘ವಿವಿಧ ಅಸಾಮಾನ್ಯ ದೈಹಿಕ ಲಕ್ಷಣ’ಗಳಿಂದ ಬಳಲುತ್ತಿದ್ದರು ಎಂದು ಚೀನಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವಕ್ತಾರೆ ಜಿನ್ನೀ ಲೀ ತಿಳಿಸಿದರು.

ಬಳಿಕ ಉದ್ಯೋಗಿಯನ್ನು ಅಮೆರಿಕಕ್ಕೆ ವಾಪಸ್ ಕಳುಹಿಸಲಾಯಿತು. ಅವರಿಗೆ ಲಘು ಮೆದುಳ ಆಘಾತವಾಗಿರುವುದು ಮೇ 18ರಂದು ನಮಗೆ ತಿಳಿದುಬಂತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News