ಅಮೆರಿಕ ಉಪಾಧ್ಯಕ್ಷ ‘ಮೂಢ ಮತ್ತು ಮೂರ್ಖ’ ಎಂದ ಉತ್ತರ ಕೊರಿಯ

Update: 2018-05-24 16:47 GMT

ಸಿಯೋಲ್, ಮೇ 24: ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ‘ಮೂಢ ಮತ್ತು ಮೂರ್ಖ’ ಎಂದು ಉತ್ತರ ಕೊರಿಯ ಗುರುವಾರ ನಿಂದಿಸಿದೆ ಹಾಗೂ ಉಭಯ ದೇಶಗಳ ನಡುವೆ ನಡೆಯಲು ನಿಗದಿಯಾಗಿರುವ ಶೃಂಗಸಮ್ಮೇಳನದಿಂದ ಹಿಂದೆ ಸರಿಯುವುದಾಗಿ ಮತ್ತೊಮ್ಮೆ ಬೆದರಿಕೆ ಹಾಕಿದೆ.

 ಇತ್ತೀಚೆಗೆ ಪೆನ್ಸ್ ಫಾಕ್ಸ್ ನ್ಯೂಸ್‌ಗೆ ನೀಡಿದ ಮಾಧ್ಯಮ ಸಂದರ್ಶನವೊಂದನ್ನು ಖಂಡಿಸಿ ಉತ್ತರ ಕೊರಿಯದ ವಿದೇಶ ವ್ಯವಹಾರಗಳ ಸಹಾಯಕ ಸಚಿವೆ ಚೋ ಸನ್ ಹುಯಿ ಹೇಳಿಕೆಯೊಂದನ್ನು ನೀಡಿದ್ದಾರೆ. ಉತ್ತರ ಕೊರಿಯ ಸಚಿವರ ಹೇಳಿಕೆಯನ್ನು ಸರಕಾರಿ ಒಡೆತನದ ಕೆಸಿಎನ್‌ಎ ಸುದ್ದಿ ಸಂಸ್ಥೆ ಪ್ರಕಟಿಸಿದೆ.

‘‘ಅಮೆರಿಕದ ಉಪಾಧ್ಯಕ್ಷರಿಂದ ಇಂಥ ಮೂಢ ಮತ್ತು ಮೂರ್ಖ ಹೇಳಿಕೆ ಬಂದಿರುವುದರಿಂದ ನನಗೆ ಆಶ್ಚರ್ಯ ಉಂಟಾಗಿದೆ’’ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ನಡುವೆ ನಡೆಯಲು ನಿಗದಿಯಾಗಿರುವ ಮಾತುಕತೆಯ ಮುನ್ನ ಅಮೆರಿಕದೊಂದಿಗೆ ಚೆಲ್ಲಾಟವಾಡಲು ಉತ್ತರ ಕೊರಿಯ ಮುಂದಾದರೆ, ಅದು ದೊಡ್ಡ ‘ಪ್ರಮಾದ’ವಾಗಲಿದೆ ಎಂಬುದಾಗಿ ಫಾಕ್ಸ್ ನ್ಯೂಸ್‌ಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ಪೆನ್ಸ್ ಎಚ್ಚರಿಕೆ ನೀಡಿದ್ದರು.

ಉಭಯ ನಾಯಕರ ನಡುವೆ ಸಿಂಗಾಪುರದಲ್ಲಿ ಜೂನ್ ತಿಂಗಳಲ್ಲಿ ಶೃಂಗ ಸಮ್ಮೇಳನ ನಡೆಯಲು ನಿಗದಿಯಾಗಿತ್ತು.

ಕಿಮ್ ಜಾಂಗ್ ಉನ್ ಪರಮಾಣು ನಿಶ್ಶಸ್ತ್ರ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಲಿಬಿಯಕ್ಕೆ ಆದ ಪರಿಸ್ಥಿತಿಯೇ ಬರಬಹುದು ಎಂಬುದಾಗಿಯೂ ಅವರು ಎಚ್ಚರಿಸಿದ್ದರು.

ಲಿಬಿಯವು ಪರಮಾಣು ಶಸ್ತ್ರಗಳನ್ನು ತೊರೆದ ಹಲವು ವರ್ಷಗಳ ಬಳಿಕ ನಡೆದ ಬಂಡಾಯದಲ್ಲಿ, ಆ ದೇಶದ ನಾಯಕ ಮುಅಮ್ಮರ್ ಗಡ್ಡಾಫಿ ಹತ್ಯೆಗೀಡಾಗಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News