2019ರಲ್ಲಿ ಮೋದಿ ಸರಕಾರಕ್ಕೆ ಅಧಿಕಾರ ಪಡೆಯುವ ಅರ್ಹತೆಯಿಲ್ಲ
ಮೋದಿ ಸರಕಾರ ಬೇಕು ಎಂದವರೆಷ್ಟು ಗೊತ್ತಾ ?
ಹೊಸದಿಲ್ಲಿ, ಮೇ 24: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮಿತ್ರಕೂಟ 2019ಕ್ಕೆ ಅಧಿಕಾರ ಪಡೆಯುವ ಅರ್ಹತೆ ಹೊಂದಿಲ್ಲ ಎಂದು ಭಾವಿಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಎಬಿಪಿ ನ್ಯೂಸ್-ಸಿಎಸ್‌ಡಿಎಸ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಸುಮಾರು ಶೇ.47ರಷ್ಟು ಜನ ಮೋದಿ ಸರಕಾರಕ್ಕೆ ಎರಡನೇ ಅವಧಿಗೆ ಅಧಿಕಾರ ನೀಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.
ಇದೇ ಸಂಸ್ಥೆ ಜುಲೈ 2013ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಆಗ ಅಧಿಕಾರದಲ್ಲಿದ್ದ ಯುಪಿಎ ಮಿತ್ರಕೂಟದ ವಿರುದ್ಧವಾಗಿ ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂದು ಕೂಡಾ ಶೇ.39ರಷ್ಟು ಮಂದಿ ಯುಪಿಎ ಅಧಿಕಾರಕ್ಕೆ ಬರಲು ಅರ್ಹವಲ್ಲ ಎಂದು ತಿಳಿಸಿದ್ದರು.ಶೇ.31ರಷ್ಟು ಜನ ಬೆಂಬಲಿಸಿದ್ದರೆ ಉಳಿದವರು ತಟಸ್ತರಾಗಿದ್ದರು. ಸಮೀಕ್ಷೆಯ ವರದಿ ನಿಜವಾಗಿತ್ತು.
19 ರಾಜ್ಯಗಳ 15,859 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಶೇ.47ರಷ್ಟು ಮಂದಿ ಮೋದಿ ಸರಕಾರಕ್ಕೆ 2019ರಲ್ಲಿ ಅಧಿಕಾರ ಪಡೆಯಲು ಅರ್ಹತೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದರೆ, ಸುಮಾರು ಶೇ.39ರಷ್ಟು ಮಂದಿ ಮೋದಿ ಸರಕಾರದ ಪರ ಇದ್ದರೆ ಉಳಿದವರು ತಟಸ್ತ ನಿಲುವು ತಳೆದಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರು ಮೋದಿ ಸರಕಾರದ ವಿರುದ್ಧವಾಗಿದ್ದಾರೆ.
ಸುಮಾರು ಶೇ.75ರಷ್ಟು ಮುಸ್ಲಿಮರು, ಐದನೇ ಮೂರರಷ್ಟು ಹಾಗೂ ಶೇ.50ರಷ್ಟು ಸಿಖ್ಖರು ಮೋದಿ ಸರಕಾರ ಅಧಿಕಾರಕ್ಕೆ ಮರಳುವ ವಿರುದ್ಧವಾಗಿದ್ದಾರೆ. ಅಲ್ಲದೆ ಹಿಂದೂ ಧರ್ಮೀಯರಲ್ಲೂ ಹೆಚ್ಚಿನವರು ಮೋದಿ ಸರಕಾರದ ವಿರುದ್ಧವಾಗಿದ್ದಾರೆ . ಶೇ.48ರಷ್ಟು ಹಿಂದೂಗಳು ಮೋದಿ ಸರಕಾರಕ್ಕೆ ಮತ್ತೊಂದು ಅವಕಾಶ ನೀಡುವ ಬಗ್ಗೆ ಒಲವು ಹೊಂದಿದ್ದರೆ ಶೇ.42ರಷ್ಟು ಮಂದಿ ವಿರುದ್ಧವಾಗಿದ್ದಾರೆ . ಹಿಂದೂ ಸಮುದಾಯದಲ್ಲಿ ಹೆಚ್ಚಿನ ದಲಿತರು ಹಾಗೂ ಆದಿವಾಸಿಗಳು ಮೋದಿ ಸರಕಾರ ಮರಳಿ ಅಧಿಕಾರ ಪಡೆಯುವುದನ್ನು ಬಯಸುವುದಿಲ್ಲ. ಶೇ.55ರಷ್ಟು ದಲಿತರು ಹಾಗೂ ಶೇ.43ರಷ್ಟು ಆದಿವಾಸಿಗಳು ಮೋದಿ ಸರಕಾರ ಮರಳಿ ಅಧಿಕಾರ ಪಡೆಯಬಾರದು ಎಂದು ಬಯಸಿದ್ದಾರೆ. ಅಲ್ಲದೆ ಇತರ ಹಿಂದುಳಿದ ವರ್ಗ(ಒಬಿಸಿ)ದಲ್ಲಿ ಶೇ.42ರಷ್ಟು ಮಂದಿ ಮೋದಿ ಸರಕಾರದ ವಿರುದ್ಧವಾಗಿದ್ದಾರೆ.
ತಕ್ಷಣ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿಗೆ ಮತ ಹಾಕುವವರ ಪ್ರಮಾಣ ಈ ವರ್ಷದ ಆರಂಭದಲ್ಲಿ ಶೇ.34 ಆಗಿದ್ದರೆ ಈಗ ಶೇ.32ಕ್ಕೆ ಇಳಿದಿದೆ. ಇದು ಮೋದಿ ಸರಕಾರದ ಜನಪ್ರಿಯತೆ ಕುಸಿಯುತ್ತಿರುವುದರ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ.