ತೂತುಕುಡಿಯಲ್ಲಿ ವ್ಯವಹಾರ ಮುನ್ನಡೆಸಲು ಆಸಕ್ತಿಯಿಲ್ಲ: ಸಂಸ್ಥೆಯ ಅಧ್ಯಕ್ಷ

Update: 2018-05-24 18:17 GMT

ಹೊಸದಿಲ್ಲಿ, ಮೇ 24: ತೂತುಕುಡಿಯಲ್ಲಿ ವೇದಾಂತ ಸಂಸ್ಥೆಯ ಅಧೀನದ ಸ್ಟರ್ಲೈಟ್ ಸಂಸ್ಥೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಸಂಸ್ಥೆಯ ವ್ಯವಹಾರವನ್ನು ಮುನ್ನಡೆಸದಿರಲು ತಾನು ನಿರ್ಧರಿಸಿರುವುದಾಗಿ ಸಂಸ್ಥೆಯ ಅಧ್ಯಕ್ಷ ಅನಿಲ್ ಅಗರ್‌ವಾಲ್ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ತಮ್ಮ ಸಂಸ್ಥೆಯು ವಿದೇಶಿ ಶಕ್ತಿಗಳ ಒಳಸಂಚಿಗೆ ಬಲಿಯಾಗಿದೆ. ಆದ್ದರಿಂದ ಆ ರಾಜ್ಯದಲ್ಲಿ ಸಂಸ್ಥೆಯ ವ್ಯವಹಾರವನ್ನು ಮುನ್ನಡೆಸಲು ತಾನು ಬಯಸುವುದಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಾರತವು ಆಮದಿನ ಮೇಲೆಯೇ ಅವಲಂಬಿತವಾಗಿರಬೇಕು ಎಂಬ ಆಶಯವನ್ನು ಹೊಂದಿರುವ ಕೆಲವು ಸ್ಥಾಪಿತ ಹಿತಾಸಕ್ತಿಗಳು ಭಾರತವನ್ನು ತಮ್ಮ ಉತ್ಪನ್ನಗಳ ಮಾರುಕಟ್ಟೆಯಾಗಿ ಬಳಸಿಕೊಳ್ಳುತ್ತಿವೆ. ಭಾರತವು ಕಷ್ಟಪಟ್ಟು ಸಂಪಾದಿಸಿದ ವಿದೇಶಿ ವಿನಿಮಯವನ್ನು ಖರ್ಚು ಮಾಡಿ ಮಿಲಿಯಾಂತರ ಉದ್ಯೋಗ ನಷ್ಟ ಮಾಡಿಕೊಳ್ಳುವುದನ್ನು ಈ ಶಕ್ತಿಗಳು ಬಯಸುತ್ತಿವೆ ಎಂದು ಅಗರ್‌ವಾಲ್ ಹೇಳಿದ್ದಾರೆ. ಅನಿಲ್ ಅಗರ್‌ವಾಲ್ ವೇದಾಂತ ಸಂಸ್ಥೆಯಲ್ಲಿ ಶೇ.71.4ರಷ್ಟು ಶೇರುಗಳನ್ನು ಹೊಂದಿದ್ದಾರೆ.

 ಗೋವಾದಲ್ಲಿ ವೇದಾಂತ ಸಂಸ್ಥೆ ನಡೆಸುತ್ತಿರುವ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ನಿಲ್ಲಿಸುವಂತೆ ನ್ಯಾಯಾಲಯ ವಿಧಿಸಿರುವ ಆದೇಶ ಹಾಗೂ ತೂತುಕುಡಿ ತಾಮ್ರ ಘಟಕದ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಅಗರ್‌ವಾಲ್ ಈ ಹೇಳಿಕೆ ನೀಡಿದ್ದಾರೆ. ತೂತುಕುಡಿಯಲ್ಲಿ ತಾಮ್ರದ ಅದಿರು ಕರಗಿಸುವ ಸಂಸ್ಥೆಯನ್ನು ವಿಸ್ತರಿಸಿ ವಿಶ್ವದಲ್ಲೇ ಬೃಹತ್ ತಾಮ್ರದ ಅದಿರು ಕರಗಿಸುವ ಸಂಸ್ಥೆಯನ್ನಾಗಿಸುವ ವೇದಾಂತ ಸಂಸ್ಥೆಯ ಪ್ರಯತ್ನಕ್ಕೆ ಬುಧವಾರ ಸ್ಥಳೀಯ ನ್ಯಾಯಾಲಯವು ತಾತ್ಕಾಲಿಕ ತಡೆ ನೀಡಿದೆ. ಭಾರತದ ಎರಡನೇ ಬೃಹತ್ ಉದ್ದಿಮೆಯಾಗಿರುವ ತೂತುಕುಡಿಯ ಸ್ಟರ್ಲೈಟ್ ಸಂಸ್ಥೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ . ನೀರು ಹಾಗೂ ಗಾಳಿಯನ್ನು ಕಲುಷಿತಗೊಳಿಸುತ್ತಿರುವ ಕಾರಣ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಹಾಗೂ ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

ಆದರೆ ಈ ಆರೋಪವನ್ನು ನಿರಾಕರಿಸುವ ವೇದಾಂತ ಸಂಸ್ಥೆ, ಸ್ಥಾವರ ಶೀಘ್ರ ಕಾರ್ಯಾಚರಣೆಯನ್ನು ಮರು ಆರಂಭಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ಲಂಡನ್ ಶೇರುಮಾರ್ಕೆಟ್‌ನಲ್ಲಿ ಲಿಸ್ಟೆಡ್ ಆಗಿರುವ ವೇದಾಂತ ರಿಸೋರ್ಸಸ್ ಸಂಸ್ಥೆಯ ಮಾಲಿಕ, ಬಿಲಿಯಾಧೀಶ ಅನಿಲ್ ಅಗ್ರವಾಲ್ ವಿಶ್ವದಾದ್ಯಂತ ವ್ಯವಹಾರವನ್ನು ಹೊಂದಿದ್ದು ಶೀಘ್ರದಲ್ಲೇ ಆಪ್ರಿಕಾದಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ವ್ಯವಹಾರ ಆರಂಭಿಸುವುದಾಗಿ ತಿಳಿಸಿದ್ದಾರೆ.

ಲೋಹದ ಗುಜರಿ ವಸ್ತುಗಳ ಮಾರಾಟ ಮಾಡುತ್ತಿದ್ದ ಅನಿಲ್ ಅಗರ್‌ವಾಲ್ ಬಳಿಕ ಲೋಹಗಳ ಭಾರೀ ಉದ್ಯಮಿಯಾಗಿ ಬೆಳೆದವರು. 1979ರಲ್ಲಿ ತಾಮ್ರದ ಅದಿರು ಕರಗಿಸುವ ಸಂಸ್ಥೆಯೊಂದನ್ನು ಖರೀದಿಸುವ ಮೂಲಕ ವ್ಯವಹಾರ ಆರಂಭಿಸಿದ್ದ ವೇದಾಂತ ಸಂಸ್ಥೆಯ ವ್ಯವಹಾರ ಇಂದು ಆಫ್ರಿಕಾ, ಅಯರ್ಲಾಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳಿಗೂ ವ್ಯಾಪಿಸಿದೆ. ಲಂಡನ್ ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಪ್ರಪ್ರಥಮ ಭಾರತೀಯ ಸಂಸ್ಥೆ ಇದಾಗಿದೆ(2003ರಲ್ಲಿ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News