ದಿಲ್ಲಿ ಮಾಸ್ಟರ್‌ಪ್ಲಾನ್ : ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಹೊಸದಿಲ್ಲಿ, ಮೇ 24: ದಿಲ್ಲಿ ಬೃಹತ್‌ಯೋಜನೆ(ಮಾಸ್ಟರ್‌ಪ್ಲಾನ್) 2021ಕ್ಕೆ ತಿದ್ದುಪಡಿ ಮಾಡುವ ಕುರಿತು ಸಾರ್ವಜನಿಕರ ಸಲಹೆ ಆಹ್ವಾನಿಸಿರುವ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ)ದ ಆದೇಶದಲ್ಲಿ ಮಾರ್ಪಾಡು ಕೋರಿ ಕೇಂದ್ರ ಸರಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಈ ಪ್ರಕ್ರಿಯೆಯನ್ನು ಡಿಡಿಎ ಬಹು ಹಿಂದೆಯೇ ಕೈಗೊಂಡಿರುವ ಕಾರಣ ಸಾರ್ವಜನಿಕರ ಸಲಹೆ ಅಥವಾ ಆಕ್ಷೇಪಗಳನ್ನು ಆಹ್ವಾನಿಸುವ ಅಗತ್ಯವಿಲ್ಲ ಎಂಬ ಕೇಂದ್ರ ಸರಕಾರದ ವಾದವನ್ನು ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಹಾಗೂ ನವೀನ್ ಸಿನ್ಹ ಅವರಿದ್ದ ನ್ಯಾಯಪೀಠ ತಿರಸ್ಕರಿಸಿತು.
ಸಂವಾದಾತ್ಮಕ ವೆಬ್‌ಸೈಟ್ ಆರಂಭಿಸುವುದು, ಸಾರ್ವಜನಿಕರಿಗೆ ತಮ್ಮ ದೂರು, ಸಲಹೆ ದಾಖಲಿಸಲು ಅನುಕೂಲವಾಗುವ ಸ್ಮಾರ್ಟ್‌ಫೋನ್ ಆ್ಯಪ್ ಆರಂಭಿಸುವುದು ಸೇರಿದಂತೆ ಡಿಡಿಎ ಸಲ್ಲಿಸಿದ್ದ ಬೃಹತ್ ಯೋಜನೆಯನ್ನು ಮೇ 15ರಂದು ಸ್ವೀಕರಿಸಿದ್ದ ಸುಪ್ರೀಂಕೋರ್ಟ್, ಈ ಯೋಜನೆಯನ್ನು 15 ದಿನದೊಳಗೆ ಕಾರ್ಯಗತ ಮಾಡುವಂತೆ ಡಿಡಿಎಗೆ ಸೂಚಿಸಿತ್ತು. ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಸೇರಿದಂತೆ ಯೋಜನೆಯ ಷರತ್ತನ್ನು ಉಲ್ಲಂಘಿಸುವ ಪ್ರಕರಣದಲ್ಲಿ ಅಧಿಕಾರಿಗಳನ್ನು ಹೊಣೆಯಾಗಿಸುವಂತೆ ಹಾಗೂ ನಗರವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಾಗೂ ಮುಂದೆ ನಡೆಯಲಿರುವ ಎಲ್ಲಾ ನಿರ್ಮಾಣ ಕಾಮಗಾರಿಗಳು ವಿಶೇಷ ಕಾರ್ಯಪಡೆಯ ಮೇಲುಸ್ತುವಾರಿಯಲ್ಲಿ ನಡೆಯಬೇಕೆಂದು ಡಿಡಿಎ ಸಲಹೆ ನೀಡಿದೆ. ಸುಪ್ರೀಂಕೋರ್ಟ್‌ನ ಸೂಚನೆಯಂತೆ ಎಪ್ರಿಲ್ 25ರಂದು ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ.