ತೈಲ ಬೆಲೆಯೇರಿಕೆ ನಿಯಂತ್ರಣಕ್ಕೆ ಕ್ರಮ: ಪ್ರಧಾನ್ ಭರವಸೆ

Update: 2018-05-24 18:22 GMT

ಹೊಸದಿಲ್ಲಿ, ಮೇ 24: ಸತತ 11ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆಯಾಗಿದ್ದು ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ದಾಖಲೆಯ ಮಟ್ಟಕ್ಕೆ ತಲುಪಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರಕಾರ ಅಲ್ಪಾವಧಿ ಹಾಗೂ ದೀರ್ಘಾವಧಿಯ ಪರಿಹಾರವನ್ನು ರೂಪಿಸುತ್ತಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಲೀಟರ್‌ಗೆ 19ರಿಂದ 31 ಪೈಸೆಯಷ್ಟು ದರ ಏರಿಕೆಯಾಗಿದ್ದು ದಿಲ್ಲಿಯಲ್ಲಿ ಈಗ ಪೆಟೋಲ್ ದರ ಲೀಟರ್‌ಗೆ 77.47 ರೂ. ಹಾಗೂ ಡೀಸೆಲ್‌ಗೆ 68.53 ರೂ. ತಲುಪಿದೆ.ಜಾಗತಿಕ ಕಚ್ಛಾತೈಲದ ದರ ವಿಪರೀತ ಹೆಚ್ಚಳವಾಗುತ್ತಿರುವುದು ದರ ಏರಿಕೆಗೆ ಪ್ರಧಾನ ಕಾರಣ ಎನ್ನಲಾಗುತ್ತಿದ್ದರೂ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೈಲಗಳ ಮೇಲೆ ವಿಧಿಸುತ್ತಿರುವ ಅಧಿಕ ತೆರಿಗೆಯೂ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಪೆಟ್ರೋಲ್ ಹಾಗೂ ಡೀಸೆಲನ್ನು ಜಿಎಸ್‌ಟಿ ವ್ಯವಸ್ಥೆಯಡಿ ತಂದರೆ ದರ ಇಳಿಕೆಯಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಪೆಟ್ರೋಲ್-ಡೀಸೆಲ್ ದರ ಇಳಿಕೆಯ ಕುರಿತು ಕಾರ್ಯಪಡೆಯೊಂದು ಈಗಾಗಲೇ ಕಾರ್ಯೋನ್ಮುಖವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಜಿಎಸ್‌ಟಿಯಡಿ ತರುವ ಸಲಹೆಗೆ ಮಹಾರಾಷ್ಟ್ರ ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ಫಡ್ನವೀಸ್ ತಿಳಿಸಿದ್ದಾರೆ.

ತೈಲ ದರ ಹೆಚ್ಚುತ್ತಿರುವ ಬಗ್ಗೆ ವಿರೋಧ ಪಕ್ಷಗಳು ಕೇಂದ್ರ ಸರಕಾರವನ್ನು ಟೀಕಿಸಿವೆ. ಫಿಟ್‌ನೆಸ್ ಬಗ್ಗೆ ವಿರಾಟ್ ಕೊಹ್ಲಿ ಒಡ್ಡಿರುವ ಸವಾಲನ್ನು ಮೋದಿ ಸ್ವೀಕರಿಸಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಕೊಹ್ಲಿ ಸವಾಲು ಸ್ವೀಕರಿಸಿದ್ದಕ್ಕಾಗಿ ಅಭಿನಂದನೆಗಳು. ಈಗ ನನ್ನದೊಂದು ಸವಾಲಿದೆ ಸ್ವೀಕರಿಸಿ.. ಪೆಟ್ರೋಲ್, ಡೀಸೆಲ್ ದರ ಇಳಿಸಿ. ಇಲ್ಲದಿದ್ದರೆ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ , ಕಾಂಗ್ರೆಸ್ ಕಾರ್ಯಕರ್ತರು ಗೋವಾದ ಪಣಜಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಪರಿಸರದಿಂದ ಮುಖ್ಯಮಂತ್ರಿ ಕಚೇರಿಯವರೆಗೆ ಕುದುರೆ ಮೇಲೆ ಪ್ರಯಾಣಿಸಿ ಮನವಿ ಪತ್ರ ನೀಡುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಮೇ 14ರಿಂದ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 2.84 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 2.60 ರೂ. ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News