ಕೊಲೆಗಡುಕ ಬಿಜೆಪಿ ತನ್ನ ದಾರಿಗೆ ಅಡ್ಡಬರುವ ಪ್ರತಿಯೊಬ್ಬರನ್ನೂ ಇರಿಯುತ್ತಿದೆ: ಶಿವಸೇನೆ

Update: 2018-05-25 14:25 GMT

ಮುಂಬೈ,ಮೇ 25: ತಾನು 'ದ್ರೋಹಿ' ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆರೋಪಕ್ಕೆ ಶುಕ್ರವಾರ ತಿರುಗೇಟು ನೀಡಿರುವ ಶಿವಸೇನೆಯು, ಬಿಜೆಪಿಯು 'ಹುಚ್ಚ ಕೊಲೆಗಡುಕ'ನಾಗಿದ್ದು, ತನ್ನ ದಾರಿಗಡ್ಡವಾಗಿ ಬರುವ ಪ್ರತಿಯೊಬ್ಬರನ್ನೂ ಅದು ಇರಿಯುತ್ತಿದೆ ಎಂದು ಬಣ್ಣಿಸಿದೆ.

 ಮೇ 28ರಂದು ನಡೆಯಲಿರುವ ಪಾಲ್ಘರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕಾಗಿ ಆಗಮಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಎರಡು ದಿನಗಳ ಹಿಂದೆ ವಿರಾರ್‌ನಲ್ಲಿ ಬಹಿರಂಗ ಸಭೆಯಲ್ಲಿ ಮರಾಠಾ ದೊರೆ ಛತ್ರಪತಿ ಶಿವಾಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವಾಗ ತನ್ನ ಪಾದರಕ್ಷೆಗಳನ್ನು ಕಳಚದಿದ್ದಕ್ಕಾಗಿ ಅವರನ್ನೂ ಶಿವಸೇನೆ ತರಾಟೆಗೆತ್ತಿಕೊಂಡಿದೆ. ಇದು ಛತ್ರಪತಿ ಶಿವಾಜಿಯವರಿಗೆ ಮಾಡಿರುವ ಅವಮಾನವಾಗಿದ್ದು, ಈ ಬಗ್ಗೆ ಬಿಜೆಪಿ ಏನು ಹೇಳುತ್ತದೆ ಎಂದೂ ಅದು ಪ್ರಶ್ನಿಸಿದೆ.

ಶಿವಸೇನೆಯು ಬಿಜೆಪಿಯ ಬೆನ್ನಿಗೆ ಇರಿದಿದೆ ಎಂದು ಉತ್ತರ ಪ್ರದೇಶದ ಆಷಾಢಭೂತಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರು ಇತಿಹಾಸವನ್ನು ಅಥವಾ ಛತ್ರಪತಿ ಶಿವಾಜಿಯವರನ್ನು ಅರ್ಥ ಮಾಡಿಕೊಂಡಿಲ್ಲ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದ ಶುಕ್ರವಾರದ ಸಂಚಿಕೆಯ ಸಂಪಾದಕೀಯದಲ್ಲಿ ಹೇಳಿದೆ.

ಪಾಲ್ಘರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದಿವಂಗತ ಸಂಸದ ಚಿಂತಾಮಣ ವನಗಾ ಅವರ ಪುತ್ರನನ್ನು ನಿಲ್ಲಿಸುವ ಮೂಲಕ ಶಿವಸೇನೆಯು ಬಿಜೆಪಿಗೆ ದ್ರೋಹವೆಸಗಿದೆ ಎಂದು ಫಡ್ನವೀಸ್ ಇತ್ತೀಚಿಗೆ ಆರೋಪಿಸಿದ್ದರು.

ಕಾಂಗ್ರೆಸ್ ಪಕ್ಷವು ಉಪಚುನಾವಣೆಗಾಗಿ ಮಾಜಿ ಕಾಂಗ್ರೆಸ್ ನಾಯಕ ರಾಜೇಂದ್ರ ಗಾವಿತ್ ಅವರಿಗೆ ಟಿಕೆಟ್ ನೀಡಿರುವುದು ಮತ್ತು ಶಿವಸೇನೆಯ ವಿರುದ್ಧ ಮಾತನಾಡುತ್ತಿರುವುದು ನಿಜಕ್ಕೂ ಬೆನ್ನಿಗೆ ಇರಿಯುವ ಕೃತ್ಯವಾಗಿದೆ ಎಂದು ಸಂಪಾದಕೀಯವು ಹೇಳಿದೆ.

ಬೆನ್ನಿಗೆ ಇರಿಯುವ ಭಾಷೆಯು ಫಡ್ನವೀಸ್ ಅವರಿಗಾಗಲಿ,ಆದಿತ್ಯನಾಥರಿಗಾಗಲಿ ಶೋಭೆಯನ್ನು ನೀಡುವುದಿಲ್ಲ ಎಂದಿರುವ ಅದು,ಪಕ್ಷದ ಸ್ಥಾಪಕ ಬಾಳಾಸಾಹೇಬ್ ಠಾಕ್ರೆಯವರು ಜೀವಂತವಿದ್ದಾಗ ಅವರ ಬೆನ್ನಿಗೆ ಇರಿದಿದ್ದವರಿಗೆ ಬಿಜೆಪಿಯು ಅವಕಾಶಗಳನ್ನು ನೀಡುತ್ತಿದೆ ಎಂದು ಜರಿದಿದೆ.

ಎಲ್ಲ ಚುನಾವಣೆಗಳನ್ನು ಏಕಾಕಿಯಾಗಿ ಎದುರಿಸಲು ಶಿವಸೇನೆಯು ನಿರ್ಧರಿಸಿದೆ ಎಂದಿರುವ ಸಂಪಾದಕೀಯವು,ಇದು ನಾಳೆಯ ಹೋರಾಟ(2019ರ ಚುನಾವಣೆ)ದ ಆರಂಭ ಮಾತ್ರವಾಗಿದೆ ಎಂದು ಹೇಳಿದೆ.

ರಾಜಕೀಯವು ಸ್ವಾರ್ಥಿ ಜನರಿಂದ ತುಂಬಿದೆಯಾದರೂ ಶಿವಸೇನೆ ಮತ್ತು ಅದರ ಕೇಸರಿ ಧ್ವಜ ಇದಕ್ಕೆ ಹೊರತಾಗಿವೆ ಎಂದಿರುವ ಅದು,ತನ್ನ 'ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ'ಗೆ ಹೆಸರಾಗಿರುವ ಮಹಾರಾಷ್ಟ್ರದ ವರ್ಚಸ್ಸಿಗೆ ಬಿಜೆಪಿಯು ಹಾನಿಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News