ತೂತುಕುಡಿ ಹಿಂಸಾಚಾರ ಸಾವುಗಳಿಗೆ ಮುಖ್ಯಮಂತ್ರಿಯೇ ಹೊಣೆ: ಕನಿಮೊಳಿ

Update: 2018-05-25 14:33 GMT

ತೂತುಕುಡಿ, ಮೇ 25: ಎಡಪಡಿ ಕೆ. ಪಳನಿಸ್ವಾಮಿ ಸರಕಾರವು ರಕ್ತದಾಹಿಯಾಗಿದ್ದು, ತೂತುಕುಡಿಯಲ್ಲಿ ಸ್ಟರ್ಲೈಟ್ ಕಾರ್ಖಾನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ವೇಳೆ ಪೊಲೀಸ್ ಗೋಲಿಬಾರ್‌ನಲ್ಲಿ ಸಂಭವಿಸಿದ ಹದಿಮೂರು ಜನರ ಸಾವಿಗೆ ಮುಖ್ಯಮಂತ್ರಿಯೇ ಹೊಣೆ ಎಂದು ಡಿಎಂಕೆ ನಾಯಕಿ ಕನಿಮೊಳಿ ಆರೋಪಿಸಿದ್ದಾರೆ.

ತೂತುಕುಡಿಯಲ್ಲಿ ಸಂಭವಿಸಿದ ಹದಿಮೂರು ಜನರ ಸಾವನ್ನು ಖಂಡಿಸಿ ಪ್ರಮುಖ ವಿಪಕ್ಷ ಡಿಎಂಕೆ ನಡೆಸಿದ ತಮಿಳುನಾಡು ಬಂದ್ ಸಂದರ್ಭ ನಡೆಸಿದ ಪ್ರತಿಭಟನೆಯ ವೇಳೆ ಕನಿಮೊಳಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಂದ್‌ಗೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ. ಸ್ಟರ್ಲೈಟ್‌ನ ಸಿಇಒ ನಾವು ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಿದ್ದಾರೆ. ಇಂದು ಜನರು ಸಾಯುತ್ತಿದ್ದಾರೆ. ಆದರೆ ಸರಕಾರ ಏನೂ ಮಾಡುತ್ತಿಲ್ಲ ಎಂದು ಡಿಎಂಕೆ ನಾಯಕಿ ದೂರಿದ್ದಾರೆ. ಸ್ಟರ್ಲೈಟ್ ಕೋಪರ್ ನೂತನವಾಗಿ ಸ್ಥಾಪಿಸಿದ್ದ ಅದಿರು ಕರಗಿಸುವ ಕಾರ್ಖಾನೆಯನ್ನು ವಿರೋಧಿಸಿ ಸ್ಥಳೀಯರು ಮಂಗಳವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಹತ್ತು ಮಂದಿ ಸಾವನ್ನಪ್ಪಿದ್ದರು.ಬುಧವಾರದಂದು ಮತ್ತೆ ಮೂರು ಮಂದಿ ಪ್ರಾಣ ಕಳೆದುಕೊಳ್ಳುವ ಮೂಲಕ ಮೃತರ ಸಂಖ್ಯೆ ಹದಿಮೂರಕ್ಕೇರಿತ್ತು.

ಲಂಡನ್‌ನಲ್ಲಿ ಮುಖ್ಯಕಚೇರಿಯನ್ನು ಹೊಂದಿರುವ ವೇದಾಂತ ರಿಸೋರ್ಸಸ್‌ನ ಬೃಹತ್ ತಾಮ್ರ ಕರಗಿಸುವ ಘಟಕವನ್ನೇ ಶಾಶ್ವತವಾಗಿ ಮುಚ್ಚಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ತಮಿಳುನಾಡು ಸರಕಾರ ತಿಳಿಸಿದೆ.

ಬಂದರು ನಗರ ತೂತುಕುಡಿಯಲ್ಲಿ ಸ್ಥಾಪಿಸಲಾಗಿರುವ ಸ್ಟರ್ಲೈಟ್ ತಾಮ್ರದ ಕಾರ್ಖಾನೆಯನ್ನು ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಮಂಗಳವಾರದಂದು ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಕೇವಲ ಎರಡು ದಿನಗಳಲ್ಲಿ ಹದಿಮೂರು ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದರು. ದೇಶದ ಎರಡನೇ ಅತಿದೊಡ್ಡ ತಾಮ್ರದ ಕಾರ್ಖಾನೆಯಾಗಿರುವ ಸ್ಟರ್ಲೈಟ್ ಹೊರಸೂಸುವ ಹೊಗೆಯು ಗಾಳಿ ಮತ್ತು ನೀರನ್ನು ಮಲಿನ ಮಾಡುತ್ತಿದ್ದು ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುತ್ತಿದೆ ಎಂದು ಸ್ಥಳೀಯರು ಹಾಗೂ ಪರಿಸರತಜ್ಞರು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News