×
Ad

ತನಿಖೆಗೆ ಕೋರಿ ವಕೀಲರ ಅರ್ಜಿಯ ಇತ್ಯರ್ಥವನ್ನು ಎನ್‌ಎಚ್‌ಆರ್‌ಸಿಗೆ ಬಿಟ್ಟ ದಿಲ್ಲಿ ಉಚ್ಚ ನ್ಯಾಯಾಲಯ

Update: 2018-05-25 20:42 IST

 ಹೊಸದಿಲ್ಲಿ,ಮೇ 25: ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ವೇದಾಂತ ಸಮೂಹದ ಸ್ಟರ್ಲೈಟ್ ತಾಮ್ರ ಘಟಕದ ವಿರುದ್ಧ ಪ್ರತಿಭಟನೆಗಳಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ಸಂಭವಿಸಿರುವ ಸಾವುಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ಕೋರಿ ನ್ಯಾಯವಾದಿ ಎ.ರಾಜರಾಜನ್ ಅವರು ಸಲ್ಲಿಸಿರುವ ಅರ್ಜಿಯನ್ನು ಇತ್ಯರ್ಥಗೊಳಿಸುವುದನ್ನು ದಿಲ್ಲಿ ಉಚ್ಚ ನ್ಯಾಯಾಲಯವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ಕ್ಕೆ ಬಿಟ್ಟಿದೆ.

ಎನ್‌ಎಚ್‌ಆರ್‌ಸಿಯು ಈಗಾಗಲೇ ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಕೈಗೆತ್ತಿಕೊಂಡಿದ್ದು,ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯಿಂದ ವರದಿಯನ್ನು ಕೇಳಿದೆ ಎಂದು ಶುಕ್ರವಾರ ಕಲಾಪದ ವೇಳೆಯಲ್ಲಿ ತಿಳಿಸಿದ ನ್ಯಾ.ರಾಜೀವ ಶಕ್ಧರ್ ಅವರು,ಸೂಕ್ತ ನಿರ್ದೇಶಗಳನ್ನು ಪಡೆದುಕೊಳ್ಳಲು ಆಯೋಗದ ಮುಂದೆ ಹಾಜರಾಗುವಂತೆ ರಾಜರಾಜನ್ ಅವರಿಗೆ ಸೂಚಿಸಿದರು.

ನಿರ್ದೇಶಗಳಿಗಾಗಿ ತನ್ನ ಅರ್ಜಿಯನ್ನು ಮೇ 29ರಂದು ಆಯೋಗದ ಮುಂದಿರಿಸುವಂತೆಯೂ ನ್ಯಾಯಾಲಯವು ಅವರಿಗೆ ತಿಳಿಸಿತು.

ತಮಿಳುನಾಡು ಮೂಲದ ರಾಜರಾಜನ್ ಅವರು ಗೋಲಿಬಾರ್ ಘಟನೆಯಲ್ಲಿ ಎನ್‌ಎಚ್‌ಆರ್‌ಸಿಯ ನೇರ ಮಧ್ಯಪ್ರವೇಶವನ್ನು ಕೋರಿ ಗುರುವಾರ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

'ಅಕ್ರಮ ಹತ್ಯೆಗಳ' ಘಟನೆಯಲ್ಲಿ ಆಯೋಗದ ತ್ವರಿತ ಮಧ್ಯಪ್ರವೇಶವನ್ನು ಕೋರಿ ತಾನು ಮೇ 23ರಂದು ಅದಕ್ಕೆ ಅರ್ಜಿ ಸಲ್ಲಿಸಿದ್ದೆ,ಆದರೆ ಅದನ್ನು ತುರ್ತು ವಿಷಯವನ್ನಾಗಿ ಪರಿಗಣಿಸಲು ಅದು ನಿರಾಕರಿಸಿತ್ತು ಮತ್ತು ವಾಸ್ತವಾಂಶಗಳನ್ನು ಕಡೆಗಣಿಸಿತ್ತು ಎಂದು ಅವರು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದರು.

 ಎನ್‌ಎಚ್‌ಆರ್‌ಸಿಯು ವಿಷಯವನ್ನು ಕೈಗೆತ್ತಿಕೊಂಡು ರಾಜ್ಯದಿಂದ ವರದಿಯನ್ನು ಕೇಳಿದ ಬಳಿಕವೂ ಮಾನವ ಹಕ್ಕುಗಳ ಉಲ್ಲಂಘನೆಗಳು ಮತ್ತು ಪೊಲೀಸರ ಗೋಲಿಬಾರ್‌ನಲ್ಲಿ ಕಾನೂನುಬಾಹಿರ ಹತ್ಯೆಗಳು ಮುಂದುವರಿದಿವೆ ಎಂದು ಅವರು ಆಪಾದಿಸಿದ್ದಾರೆ.

ಎನ್‌ಎಚ್‌ಆರ್‌ಸಿಯು ನೇರವಾಗಿ ಅಥವಾ ಸ್ವತಂತ್ರ ಏಜೆನ್ಸಿಯ ಮೂಲಕ ತ್ವರಿತ ಮಧ್ಯಪ್ರವೇಶವನ್ನು ಮಾಡದಿದ್ದರೆ ಪೊಲೀಸರಿಂದ ಜನರ ಕಾನೂನುಬಾಹಿರ ಹತ್ಯೆಗಳು ಮುಂದುವರಿಯುತ್ತವೆ ಮತ್ತು ಸಾಕ್ಷಾಧಾರಗಳು ನಾಶಗೊಳ್ಳುವ ಸಾಧ್ಯತೆಯಿದೆ ಎಂದೂ ಅರ್ಜಿಯು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News