ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಜಾಮೀನು ಸಹಿತ ವಾರಂಟ್

Update: 2018-05-25 15:58 GMT

ಶಾಹಜಾನ್‌ಪುರ(ಉ.ಪ್ರ),ಮೇ 25: ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಹಿಂದೆಗೆದುಕೊಳ್ಳಲು ಕೋರಿ ಉತ್ತರ ಪ್ರದೇಶ ಸರಕಾರವು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸ್ಥಳೀಯ ನ್ಯಾಯಾಲಯವು ಅವರ ವಿರುದ್ಧ ಜಾಮೀನು ಸಹಿತ ವಾರಂಟ್‌ನ್ನು ಹೊರಡಿಸಿದೆ.

ಪ್ರಕರಣವನ್ನು ಹಿಂದೆಗೆದುಕೊಳ್ಳುವ ರಾಜ್ಯ ಸರಕಾರದ ಮನವಿಯ ವಿರುದ್ಧ ಅತ್ಯಾಚಾರ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ.ಶಿಖಾ ಪ್ರಧಾನ್ ಅವರು ಮನವಿಯನ್ನು ತಿರಸ್ಕರಿಸಿದರಲ್ಲದೆ,ಚಿನ್ಮಯಾನಂದ ವಿರುದ್ಧ 5,000 ರೂ.ಗಳ ಜಾಮೀನು ಸಹಿತ ವಾರಂಟ್‌ನ್ನು ಹೊರಡಿಸಿದರು. ಮುಂದಿನ ವಿಚಾರಣಾ ದಿನಾಂಕವಾದ ಜು.12ರಂದು ನ್ಯಾಯಾಲಯದಲ್ಲಿ ಹಾಜರಿರುವಂತೆಯೂ ಅದು ಅವರಿಗೆ ಆದೇಶಿಸಿತು.

ತನ್ನ ಶಿಷ್ಯೆಯ ಮೇಲೆ ಅತ್ಯಾಚಾರವೆಸಗಿದ್ದ ಮತ್ತು ಆಕೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಆರೋಪವನ್ನು ಹೊತ್ತಿರುವ ಚಿನ್ಮಯಾನಂದ ವಿರುದ್ಧದ ಪ್ರಕರಣವನ್ನು ಹಿಂದೆಗೆದುಕೊಳ್ಳಲು ರಾಜ್ಯಸರಕಾರವು ಹಿಂದೆ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿತ್ತು. ಜಿಲ್ಲಾಡಳಿತವು ಈ ಪತ್ರವನ್ನು ಸಿಜೆಎಂ ನ್ಯಾಯಾಲಯಕ್ಕೆ ಕಳುಹಿಸಿತ್ತು. ಸರಕಾರದ ಕ್ರಮವನ್ನು ವಿರೋಧಿಸಿ ಅತ್ಯಾಚಾರ ಸಂತ್ರಸ್ತೆ ನ್ಯಾಯಾಲಯಕ್ಕೆ ಪತ್ರಗಳನ್ನು ಬರೆದಿದ್ದಳು.

ಪ್ರಕರಣದ ಹಿಂದೆಗೆತವನ್ನು ಶಿಫಾರಸು ಮಾಡುವಲ್ಲಿ ಸರಕಾರವು ತಪ್ಪೆಸಗಿದೆ ಎನ್ನುವುದನ್ನು ನ್ಯಾಯಾಲಯದ ಆದೇಶವು ಸಿದ್ಧಗೊಳಿಸಿದೆ. ಸರಕಾರವೀಗ ಈ ಪ್ರಕರಣದಲ್ಲಿ ನ್ಯಾಯ ಪಡೆಯಲು ತನಗೆ ನೆರವಾಗಬೇಕು ಎಂದು ಸಂತ್ರಸ್ತೆ ತನ್ನನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದಳು.

ಚಿನ್ಮಯಾನಂದ ತನ್ನನ್ನು ಆಶ್ರಮದಲ್ಲಿರಿಸಿಕೊಂಡು ತನ್ನ ಮೇಲೆ ಅತ್ಯಚಾರವೆಸಗಿದ್ದರು. ತಾನು ಗರ್ಭಿಣಿಯಾದಾಗ ಬಲಾತ್ಕಾರದಿಂದ ಗರ್ಭಪಾತ ಮಾಡಿಸಿದ್ದರು ಎಂದು ಸಂತ್ರಸ್ತೆ 2011ರಲ್ಲಿ ಇಲ್ಲಿಯ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಆರೋಪಿಸಿದ್ದಳು. ತನಿಖೆಯ ಬಳಿಕ ಪೊಲೀಸರು ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರಾದರೂ ಅಲಹಾಬಾದ್ ಉಚ್ಚ ನ್ಯಾಯಾಲಯವು ಚಿನ್ಮಯಾನಂದರ ಬಂಧನಕ್ಕೆ ತಡೆಯಾಜ್ಞೆ ನೀಡಿತ್ತು. ಪ್ರಕರಣವು 2012ರಿಂದಲೂ ಉಚ್ಚ ನ್ಯಾಯಾಲಯದಲ್ಲಿ ಬಾಕಿಯಾಗಿದೆ.

ಮೂರು ಬಾರಿ ಬಿಜೆಪಿ ಸಂಸದರಾಗಿದ್ದ ಚಿನ್ಮಯಾನಂದ 1999ರಲ್ಲಿ ವಾಜಪೇಯಿ ಸರಕಾರದಲ್ಲಿ ಸಹಾಯಕ ಆಂತರಿಕ ಭದ್ರತಾ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News