ಬಳಕೆದಾರರ ವೈಯಕ್ತಿಕ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಚೇರಿಯಿಂದ ಕರೆ ಬಂದಿತ್ತು: ಪೇಟಿಎಂ ಉಪಾಧ್ಯಕ್ಷ

Update: 2018-05-25 16:04 GMT

ಹೊಸದಿಲ್ಲಿ, ಮೇ 25: ಪ್ರಧಾನಿ ಕಚೇರಿಯಿಂದ ಕರೆ ಬಂದ ನಂತರ ಬಳಕೆದಾರರ ಮಾಹಿತಿಯನ್ನು ಒದಗಿಸಿದ್ದೇವೆ ಎಂದು ಪೇಟಿಎಂ ಸದಸ್ಯರು 'ಕೋಬ್ರಾ ಪೋಸ್ಟ್'ನ ಹೊಸ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿರುವುದು ಸಂಚಲನ ಸೃಷ್ಟಿಸಿದೆ.

“ಪ್ರಧಾನಿ ಕಚೇರಿಯಿಂದ ನನಗೇ ಕರೆ ಬಂದಿತ್ತು,. ಕೆಲ ಕಲ್ಲುತೂರಾಟಗಾರರು ಪೇಟಿಎಂ ಬಳಕೆದಾರರು ಆಗಿರಬಹುದು ಎಂದು ಹೇಳಿ ಡಾಟಾ ನೀಡುವಂತೆ ನನ್ನಲ್ಲಿ ಹೇಳಲಾಯಿತು” ಎಂದು ಪೇಟಿಎಂ ಉಪಾಧ್ಯಕ್ಷ ಅಜಯ್ ಶೇಖರ್ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಪೇಟಿಎಂನ ಹಿರಿಯ ಸದಸ್ಯರಾದ ಸುಧಾಂಶು ಗುಪ್ತಾ ಹಾಗು ಹಿರಿಯ ಉಪಾಧ್ಯಕ್ಷ ಅಜಯ್ ಶೇಖರ್ ಶರ್ಮಾ ಮಾತನಾಡಿರುವುದು 'ಕೋಬ್ರಾ ಪೋಸ್ಟ್'ನ ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

‘ಶ್ರೀಮದ್ ಭಗವದ್ ಗೀತಾ ಪ್ರಚಾರ್ ಸಮಿತಿ’ ಎಂಬ ಕಾಲ್ಪನಿಕ ಸಂಘಟನೆಯೊಂದರ ಪ್ರತಿನಿಧಿ ಎಂದು ತನ್ನನ್ನು ಪರಿಚಯಿಸಿಕೊಂಡ ಪತ್ರಕರ್ತ ಪುಷ್ಪ್ ಶರ್ಮಾ ತಾನು ಒಂದು ‘ಗುರಿ’ (ಗುಪ್ತ ವ್ಯವಸ್ಥೆ) ಹೊಂದಿದ್ದು, ‘ಸಂಘಟನೆ’ಯ ಆಜ್ಞೆಯ ಪ್ರಕಾರ ಮುಂಬರುವ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಸದೃಢಗೊಳಿಸಬೇಕಾಗಿದೆ ಎಂದು ಪೇಟಿಎಂ ಸದಸ್ಯರಲ್ಲಿ ಹೇಳುತ್ತಾರೆ.

ಇದೇ ಸಂದರ್ಭ ತಾನು ಸರಕಾರ ಹಾಗು ಆರೆಸ್ಸೆಸ್ ಜೊತೆಗೆ ನಿಕಟ ಸಂಬಂಧ ಹೊಂದಿದ್ದೇನೆ ಎಂಬುದನ್ನು ತೋರಿಸಲು ಪೇಟಿಎಂನ ಅಜಯ್ ಶೇಖರ್, “ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವಾಗ ಕಲ್ಲುತೂರಾಟ ನಿಂತಿತ್ತೋ, ಆ ಸಂದರ್ಭ ನನಗೆ ಪ್ರಧಾನಿ ಕಚೇರಿಯಿಂದ ಕರೆ ಬಂದಿತ್ತು. ಕೆಲ ಕಲ್ಲು ತೂರಾಟಗಾರರು ಪೇಟಿಎಂ ಬಳಕೆದಾರರು ಆಗಿರಬಹುದು ಎಂದು ಕರೆಯಲ್ಲಿ ತಿಳಿಸಲಾಗಿತ್ತು. ನಿಮಗೆ ಅರ್ಥವಾಯಿತೇ?” ಎಂದು ಹೇಳಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.

ಹಿಂದುತ್ವ ಸಿದ್ಧಾಂತ ಹರಡಲು ಹಾಗು ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡಲು, ಇತರ ಪಕ್ಷಗಳ ವಿರುದ್ಧ ಅಪಪ್ರಚಾರ ನಡೆಸಲು ಹಲವು ಭಾರತೀಯ ಮಾಧ್ಯಮಗಳು ಭಾರೀ ಹಣದಾಸೆಗೆ ಒಪ್ಪಿಕೊಂಡ ಕುಟುಕು ಕಾರ್ಯಾಚರಣೆಯ ವಿಡಿಯೋವನ್ನು ಈ ಹಿಂದೆ 'ಕೋಬ್ರಾಪೋಸ್ಟ್' ಬಿಡುಗಡೆ ಮಾಡಿತ್ತು. 'ಕೋಬ್ರಾ ಪೋಸ್ಟ್'ನ ಈ ಕಾರ್ಯಾಚರಣೆಗೆ ‘ಆಪರೇಶನ್ 136’ ಎಂದು ಹೆಸರಿಡಲಾಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News