×
Ad

ಭಾರತಕ್ಕೆ ಕಠಿಣ ದತ್ತಾಂಶ ರಕ್ಷಣೆ ಕಾನೂನಿನ ತುರ್ತು ಅಗತ್ಯವಿದೆ: ತಜ್ಞರು

Update: 2018-05-25 21:35 IST

ಹೊಸದಿಲ್ಲಿ,ಮೇ 25: ಭಾರತವು ಡಿಜಿಟಲ್ ಆಡಳಿತದತ್ತ ದಾಪುಗಾಲನ್ನು ಹಾಕುತ್ತಿರುವುದರಿಂದ ಪ್ರಜೆಗಳ ಖಾಸಗಿತನದ ಕುರಿತು ಹೆಚ್ಚುತ್ತಿರುವ ಕಳವಳಗಳನ್ನು ನಿವಾರಿಸಲು ಕಠಿಣ ದತ್ತಾಂಶ ರಕ್ಷಣೆ ಕಾನೂನು ಇಂದು ದೇಶದ ತುರ್ತು ಅಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದತ್ತಾಂಶ ರಕ್ಷಣೆ ಕುರಿತಂತೆ ನೀತಿ ಆಯೋಗ ಮತ್ತು ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನ ಸಹಯೋಗದಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್ ಏರ್ಪಡಿಸಿದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ತಜ್ಞರು,ಖಾಸಗಿತನ ಮತ್ತು ದತ್ತಾಂಶ ಸಂಗ್ರಹಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಲು ನಿಯಂತ್ರಣ ಪ್ರಾಧಿಕಾರ ಅಥವಾ ನ್ಯಾಯನಿರ್ಣಯ ವ್ಯವಸ್ಥೆಯ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಿದರು.

 ದಿಲ್ಲಿಯ ಕಾನೂನು ವಿವಿಯ ಸೆಂಟರ್ ಫಾರ್ ಕಮ್ಯುನಿಕೇಷನ್ ಗವರ್ನನ್ಸ್‌ನ ಕಾರ್ಯಕಾರಿ ನಿರ್ದೇಶಕಿ ಚಿನ್ಮಯಿ ಅರುಣ್ ಅವರು,ದತ್ತಾಂಶಗಳ ದಾಸ್ತಾನು,ಸಂಚಯನ ಮತ್ತು ಸಂಸ್ಕರಣೆಯು ಹೆಚ್ಚುತ್ತಿದ್ದು,ಅವುಗಳ ದುರುಪಯೋಗವನ್ನು ಎದುರಿಸಲು ವ್ಯವಸ್ಥೆಯೊಂದರ ಅಗತ್ಯವಿದೆ ಎಂದು ಹೇಳಿದರು.

 ದತ್ತಾಂಶಗಳು ನಿರ್ದಿಷ್ಟ ಕಂಪನಿಗಳ ಕೈಸೇರುವುದರ ವಿರುದ್ಧ ಎಚ್ಚರಿಕೆ ನೀಡಿದ ಕಾರ್ನೆಜಿ ಇಂಡಿಯಾದ ಫೆಲೊ ಅನಂತ ಪದ್ಮನಾಭನ್ ಅವರು, ಕಳೆದ ಐದಾರು ವರ್ಷಗಳಲ್ಲಿ ಅಮೆಝಾನ್,ಫೇಸ್‌ಬುಕ್,ಮೈಕ್ರೋಸಾಫ್ಟ್ ಮತ್ತು ಆ್ಯಪಲ್ ಹಲವಾರು ಸಂಸ್ಥೆಗಳನ್ನು ಸ್ವಾಧೀನ ಪಡಿಸಿಕೊಂಡಿವೆ, ಕಾಲಕ್ರಮೇಣ ಏನಾಗುತ್ತದೆ ಎಂದರೆ ಈ ಎಲ್ಲ ಮಹತ್ವದ,ವಿಶೇಷವಾಗಿ ಶಿಕ್ಷಣ,ಸಂಚಾರ,ಆರೋಗ್ಯಸೇವೆ,ಕೃಷಿ ಇತ್ಯಾದಿ ಪ್ರಮುಖ ಕ್ಷೇತ್ರಗಳಲ್ಲಿಯ ದತ್ತಾಂಶಗಳು ನಿರ್ದಿಷ್ಟ ಕಂಪನಿಗಳ ಕೈಸೇರುತ್ತವೆ ಎಂದು ಹೇಳಿದರು.

 ದತ್ತಾಂಶ ರಕ್ಷಣೆ ಕಾನೂನು ತುರ್ತು ಅಗತ್ಯವಾಗಿದ್ದು, ಸರಕಾರವು ಅದನ್ನು ಶೀಘ್ರವೇ ತರಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವೃಂದಾ ಭಂಡಾರಿ ಅವರು ಆಗ್ರಹಿಸಿದರು. ಹಲವಾರು ವರ್ಷಗಳಿಂದ ದತ್ತಾಂಶ ರಕ್ಷಣೆಗಾಗಿ ಸಮರ್ಥ ಕಾನೂನಿನ ಕೊರತೆಯು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ನಮ್ಮ ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ವ್ಯಾಖ್ಯಾನಿಸುವ ಕಾನೂನನ್ನು ಹೊಂದುವದು ಅಗತ್ಯವಾಗಿದೆ ಎಂದರು.

ದತ್ತಾಂಶಗಳ ರಕ್ಷಣೆಗಾಗಿ ನೂತನ ನಿಯಮಗಳನ್ನು ರೂಪಿಸುವ ಹೊಣೆ ಹೊತ್ತಿರುವ ಸಮಿತಿಯ ನೇತೃತ್ವವನ್ನು ವಹಿಸಿರುವ ನ್ಯಾ.ಬಿ.ಎನ್. ಶ್ರೀಕೃಷ್ಣ ಅವರು,ನಾವಿಂದು ಡಿಜಿಟಲ್ ಆರ್ಥಿಕತೆ ,ಡಿಜಿಟಲ್ ಆಡಳಿತ ಮತ್ತು ಎಲ್ಲ ಮಾಹಿತಿಗಳ ಡಿಜಿಟಲ್ ದಾಸ್ತಾನು ಯುಗದಲ್ಲಿದ್ದೇವೆ. ಎಲ್ಲೆಡೆಗಳಲ್ಲಿಯೂ ಡಿಜಿಟಲ್ ಹೆಜ್ಜೆಗಳಿವೆ. ಈ ಡಿಜಿಟಲ್ ಹೆಜ್ಜೆಗಳು ನಿಮ್ಮನ್ನು ಗುರುತಿಸುತ್ತವೆ... ಇದು ಒಳ್ಳೆಯದೋ ಕೆಟ್ಟದ್ದೋ ಎನ್ನುವುದು ಚರ್ಚೆಯ ವಿಷಯವಾಗಿದೆ ಎಂದು ಹೇಳಿದರು.

ತಂತ್ರಜ್ಞಾನವು ಆಡಳಿತದಲ್ಲಿ ಸಾಗರದೋಪಾದಿ ಬದಲಾವಣೆಗಳನು ತಂದಿದೆ ಎಂದು ಹೇಳಿದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಅಧ್ಯಕ್ಷ ಜೆ.ಸತ್ಯನಾರಾಯಣ ಅವರು,ಆಧಾರ್ ದತ್ತಾಂಶ ಕೋಶವು ಸುಭದ್ರವಾಗಿದೆ ಎಂದು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News