ಉತ್ತರ ಪ್ರದೇಶ: ಅತ್ಯಾಚಾರ ಸಂತ್ರಸ್ತೆ ಬಾಲಕಿಯ ದೂರು ದಾಖಲಿಸಲು ಒಪ್ಪದ ಪೊಲೀಸರು
ಲಕ್ನೊ, ಮೇ 25: 9ರ ಹರೆಯದ ಬಾಲಕಿಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ ಘಟನೆ ಉತ್ತರಪ್ರದೇಶದ ಉನ್ನಾವೊದಲ್ಲಿ ಬುಧವಾರ ನಡೆದಿದೆ. ಈ ಮಧ್ಯೆ, ಅತ್ಯಾಚಾರಕ್ಕೆ ಒಳಗಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯೊಂದಿಗೆ ಪೋಷಕರು ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದಾಗ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆದಾಡಿಸಲಾಗಿದೆ ಎಂದು ಸಂತ್ರಸ್ತ ಬಾಲಕಿಯ ಕುಟುಂಬದವರು ದೂರಿದ್ದಾರೆ.
ತಮ್ಮ ಗ್ರಾಮದಿಂದ ಟ್ರಾಕ್ಟರ್‌ನಲ್ಲಿ ಆಗಮಿಸಿದ್ದ ಬಾಲಕಿಯ ಕುಟುಂಬದವರು ಗಂಗಾ ನದಿಯಲ್ಲಿ ಪವಿತ್ರಸ್ನಾನ ಮಾಡಿ ಅಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದ್ದರು. ಈ ಸಂದರ್ಭ ಟ್ರಾಕ್ಟರ್ ಚಾಲಕನ ಪುತ್ರ ಛೋಟು ಎಂಬಾತ ಬಾಲಕಿಯನ್ನು ಜಾತ್ರೆಗೆ ಕರೆದೊಯ್ಯುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಜಾತ್ರೆಯ ಗದ್ದಲದಲ್ಲಿ ಬಾಲಕಿಯ ಚೀರಾಟ ಯಾರಿಗೂ ಕೇಳಿಲ್ಲ. ಅತ್ಯಾಚಾರ ನಡೆಸಿದ ಆರೋಪಿ ಪರಾರಿಯಾದ ಬಳಿಕ ಕುಟುಂಬದವರನ್ನು ಸೇರಿಕೊಂಡ ಬಾಲಕಿಯ ಬಟ್ಟೆಯಲ್ಲಿ ರಕ್ತದ ಕಲೆ ಕಂಡು ವಿಚಾರಿಸಿದಾಗ ಆಕೆ ವಿಷಯ ತಿಳಿಸಿದ್ದಾಳೆ. ತಕ್ಷಣ ಕುಟುಂಬದ ಸದಸ್ಯರು ಆಕೆಯನ್ನು ಸಮೀಪದ ಔರಾಸ್ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಲು ಮುಂದಾಗಿದ್ದಾರೆ. ಆದರೆ ಪೊಲೀಸ್ ಸಿಬ್ಬಂದಿ ಇವರ ಮಾತನ್ನು ಕೇಳಲು ನಿರಾಕರಿಸಿದ್ದು ಎಫ್‌ಐಆರ್ ದಾಖಲಿಸಲೂ ಒಪ್ಪಲಿಲ್ಲ. ಹಲವು ಗಂಟೆ ಗಳ ಕಾಲ ಅಲ್ಲೇ ಕಾಯಿಸಿದ ಬಳಿಕ, ಘಟನೆ ನಡೆದ ಸ್ಥಳ ಸಫೀಪುರ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ.
ಸಂತ್ರಸ್ತ ಬಾಲಕಿಯ ಕುಟುಂಬದವರನ್ನು ಪೊಲೀಸರು ಸತಾಯಿಸುತ್ತಿರುವುದನ್ನು ಕಂಡ ಯಾರೋ ವ್ಯಕ್ತಿಗಳು ವಾಟ್ಸಾಪ್‌ನಲ್ಲಿ ಸಂದೇಶ ರವಾನಿಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಸಂತ್ರಸ್ತ ಬಾಲಕಿಯ ಕುಟುಂಬದವರನ್ನು ಸಫೀಪುರ್ ಠಾಣೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದು ಅಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ಬಾಲಕಿಯ ಹೇಳಿಕೆಯ ಆಧಾರದಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಉನ್ನಾವೊದ ಹಿರಿಯ ಪೊಲೀಸ್ ಅಧಿಕಾರಿ ಎಸ್.ಕೆ.ಸಿಂಗ್ ತಿಳಿಸಿದ್ದಾರೆ.