ತೂತುಕುಡಿ ಹಿಂಸಾಚಾರ: ಸು.ಕೋರ್ಟ್‌ನಲ್ಲಿ ಮೇ 28ರಂದು ತುರ್ತು ಅರ್ಜಿಯ ವಿಚಾರಣೆ

Update: 2018-05-25 17:10 GMT

ಹೊಸದಿಲ್ಲಿ,ಮೇ 25: ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಸ್ಟರ್ಲೈಟ್ ವಿರುದ್ಧದ ರ್ಯಾಲಿ ಸಂದರ್ಭದಲ್ಲಿ ಪ್ರತಿಭಟನಾಕಾರರ ಸಾವುಗಳ ಕುರಿತಂತೆ ನ್ಯಾಯಾಲಯದ ಉಸ್ತುವಾರಿಯಡಿ ಸಿಬಿಐ ತನಿಖೆಯನ್ನು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮೇ 28ರಂದು ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅರ್ಜಿದಾರರಾದ ವಕೀಲ ಜಿ.ಎಸ್.ಮಣಿ ಅವರಿಗೆ ತಿಳಿಸಿತು.

ಇದೊಂದು ಗಂಭೀರ ವಿಷಯವಾಗಿದೆ,ತುರ್ತು ವಿಚಾರಣೆಯನ್ನು ನಡೆಸಬೇಕು ಎಂದು ಮಣಿ ಆಗ್ರಹಿಸಿದಾಗ ,ಎಲ್ಲ ತುರ್ತು ವಿಷಯಗಳನ್ನು ಮೇ 28ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಇಂದು ಮಲೋತ್ರಾ ಅವರನ್ನೊಳಗೊಂಡ ಪೀಠವು ಹೇಳಿತು.

ಆದರೆ ಮಣಿ ತನ್ನ ಆಗ್ರಹವನ್ನು ಮುಂದುವರಿಸಿದಾಗ ಕೆರಳಿದ ಪೀಠವು, ಇದು ನ್ಯಾಯಾಲಯದೊಂದಿಗೆ ಮಾತನಾಡುವ ರೀತಿಯಲ್ಲ ಎಂದು ತರಾಟೆಗೆತ್ತಿಕೊಂಡಿತು.

 ತೂತುಕುಡಿ ಜಿಲ್ಲಾಧಿಕಾರಿ,ಎಸ್‌ಪಿ ಮತ್ತು ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲು ನಿರ್ದೇಶ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಪೊಲೀಸ್ ಗೋಲಿಬಾರ್‌ನಲ್ಲಿ ಕೊಲ್ಲಲ್ಪಟ್ಟವರ ಕುಟುಂಬಗಳಿಗೆ ಘೋಷಿಸಲಾಗಿರುವ ಪರಿಹಾರವನ್ನು 10 ಲ.ರೂ.ಗಳಿಂದ 50 ಲ.ರೂ.ಗಳಿಗೆ ಹೆಚ್ಚಿಸಬೇಕು ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 25 ಲ.ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತೂತುಕುಡಿ,ತಿರುನೆಲ್ವೆಲಿ ಮತ್ತು ಕನ್ಯಾಕುಮಾರ ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆಗಳ ಪುನರಾರಂಭಕ್ಕೆ ಆದೇಶಿಸುವಂತೆಯೂ ಅರ್ಜಿಯು ಕೋರಿದೆ.

ತಮ್ಮ ಹಿರಿಯ ಅಧಿಕಾರಿಗಳು ಭಾಗಿಯಾಗಿರುವುದರಿಂದ ಘಟನೆಯ ಬಗ್ಗೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಯನ್ನು ನಡೆಸಲು ರಾಜ್ಯ ಪೋಲೀಸರಿಗೆ ಸಾಧ್ಯವಿಲ್ಲ ಎಂದು ಆರೋಪಿಸಿರುವ ಅರ್ಜಿಯು, ನ್ಯಾಯಾಲಯದ ಉಸ್ತುವಾರಿಯಡಿ ಸಿಬಿಐ ತನಿಖೆಗೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News