ಕರ್ನಾಟಕ ಚುನಾವಣೆಯ ಮೇಲೆ ಪ್ರಭಾವ ಬೀರಲು ಯತ್ನಿಸಿತ್ತೇ ದಿನಪತ್ರಿಕೆ?
ಹೊಸದಿಲ್ಲಿ, ಮೇ 25: ಪೇಟಿಎಂ ಬಳಕೆದಾರರ ಮಾಹಿತಿಯನ್ನು ನೀಡಲು ಪ್ರಧಾನಮಂತ್ರಿ ಕಚೇರಿಯಿಂದಲೇ ಕರೆ ಬಂದಿತ್ತು ಎಂದು ಪೇಟಿಎಂ ಉಪಾಧ್ಯಕ್ಷ ಕೋಬ್ರಾ ಪೋಸ್ಟ್ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿರುವ ವಿಚಾರ ಭಾರೀ ಸಂಚಲನ ಸೃಷ್ಟಿಸಿರುವ ನಡುವೆಯೇ ಕರ್ನಾಟಕ ಚುನಾವಣೆ ಮೇಲೆ ಪ್ರಭಾವ ಬೀರಲು ಪತ್ರಿಕೆಯೊಂದು ಪ್ರಯತ್ನಿಸಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಹೆಚ್ಚಿನ ಮಾಧ್ಯಮ ಸಂಸ್ಥೆಗಳ ಮಾಲಕತ್ವವನ್ನು ರಾಜಕಾರಣಿಗಳೇ ಹೊಂದಿದ್ದು, ಅಥವಾ ರಾಜಕಾರಣಿಗಳು ಪೋಷಿಸುತ್ತಿರುವ ಕೆಲ ಮಾಧ್ಯಮಗಳು ‘ನಿರ್ದಿಷ್ಟ’ ಪಕ್ಷಗಳ ಪರವಾಗಿಯೇ ಕೆಲಸ ಮಾಡುತ್ತದೆ ಎಂದು ‘ಆಪರೇಶನ್ 136’ನ ಸಂಪಾದಕ ಅನಿರುದ್ಧ ಬಹಾಲ್ ಹೇಳುತ್ತಾರೆ.
ಆಂಧ್ರಪ್ರದೇಶದಲ್ಲಿರುವ ಎಬಿಎನ್ ಆಂಧ್ರಜ್ಯೋತಿ ಎಂಬ ತೆಲುಗು ಟಿವಿ ನ್ಯೂಸ್ ಚಾನೆಲ್ ನ ಮಾರ್ಕೆಟಿಂಗ್ ಮ್ಯಾನೇಜರ್ ಒಬ್ಬರು ಕರ್ನಾಟಕ ಚುನಾವಣೆ ವಿಚಾರದಲ್ಲಿ ಕುಟುಕು ಕಾರ್ಯಾಚರಣೆಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಚಾನೆಲ್ ನ ಸಂಪರ್ಕವು ಟಿಡಿಪಿ ಮಾತ್ರವಲ್ಲದೆ, ಬಿಜೆಪಿ ಹಾಗು ಇತರ ಪಕ್ಷಗಳ ಜೊತೆಗೂ ಇದೆ. ಇಷ್ಟೇ ಅಲ್ಲದೆ ಕರ್ನಾಟಕ ಚುನಾವಣೆಯ ಮೇಲೂ ಪ್ರಭಾವ ಬೀರಲು ತಮ್ಮ ಪತ್ರಿಕೆ ‘ಆಂಧ್ರ ಜ್ಯೋತಿ’ ಸಾಮರ್ಥ್ಯ ಹೊಂದಿದೆ ಎಂದು ಇದರ ಮಾರ್ಕೆಟಿಂಗ್ ಮ್ಯಾನೇಜರ್ ಇ.ವಿ.ಶಶಿಧರ್ ಹೇಳಿದ್ದಾರೆ ಎನ್ನಲಾಗಿದೆ.
ಎಬಿಎನ್ ಆಂಧ್ರ ಜ್ಯೋತಿ ಎನ್ನುವ ಈ ಪ್ರಸಿದ್ಧ ಚಾನೆಲ್ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಪೋಷಣೆಯಲ್ಲಿದೆ. “ಟಿಡಿಪಿ ಜೊತೆಗೂ ನಮಗೆ ಉತ್ತಮ ಸಂಬಂಧವಿದೆ. ಆಂಧ್ರ ಪ್ರದೇಶ ಸರಕಾರದ ಅಧಿಕೃತ ಕಾರ್ಯಕ್ರಮದ ಪ್ರಸಾರ ಹಕ್ಕುಗಳೂ ನಮ್ಮ ಬಳಿಯಿದೆ” ಎಂದು ಶಶಿಧರ್ ಹೇಳಿದ್ದಾರೆ ಎನ್ನಲಾಗಿದೆ.