ರಾಹುಲ್ ಗಾಂಧಿಯದ್ದೆಂಬ ನಕಲಿ ಟ್ವೀಟ್ ಪೋಸ್ಟ್ ಮಾಡಿ ಪೇಚಿಗೀಡಾದ ಬಿಜೆಪಿ ಸಂಸದ ಪರೇಶ್ ರಾವಲ್

Update: 2018-05-26 11:31 GMT

ಹೊಸದಿಲ್ಲಿ, ಮೇ 26: "ಪೆಟ್ರೋಲ್ ದರಗಳು ಪ್ರತಿ ಕೆಜಿಗೆ 80 ರೂ.ಗೆ ಏರಿಕೆಯಾಗಿದೆ ಆದರೂ ಸರಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ''.... ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡಿದ್ದೆಂದು ಹೇಳಲಾದ ಟ್ವೀಟ್ ಒಂದರ ಸ್ಕ್ರೀನ್ ಶಾಟ್ ಅನ್ನು ಬಿಜೆಪಿ ಸಂಸದ ಪರೇಶ್ ರಾವಲ್ ತಮ್ಮ ಟ್ವಿಟ್ಟರ್ ಟೈಮ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸ್ಕ್ರೀನ್ ಶಾಟ್ ನಲ್ಲಿ ಆಗಿರುವ ಪ್ರಮಾದ ಪೆಟ್ರೋಲ್ ಪ್ರತಿ ಲೀಟರ್ ಗೆ ಎನ್ನುವ ಬದಲು ಪ್ರತಿ ಕೆಜಿ ಎಂದು ಬರೆಯಲಾಗಿದ್ದ ಕಡೆ ಸರ್ಕಲ್ ಮಾಡಿ ಕಾಂಗ್ರೆಸ್ ಅಧ್ಯಕ್ಷರು ಮಾಡಿದ್ದೆನ್ನಲಾದ ಪ್ರಮಾದವನ್ನು ಬೊಟ್ಟು ಮಾಡಿ ತೋರಿಸುವ ಯತ್ನ ನಡೆಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷರು ನಿಜವಾಗಿಯೂ ಇಂತಹ ಒಂದು ಪ್ರಮಾದವೆಸಗಿದ್ದಾರೆಯೇ ?

ಈ ಬಗ್ಗೆ Altnews.in ಪರಿಶೀಲಿಸಿದಾಗ ಅಂತಹ ಒಂದು ಟ್ವೀಟ್ ರಾಹುಲ್ ಅವರ ಟೈಮ್ ಲೈನ್ ನಲ್ಲೇ ಇಲ್ಲ ಎಂದು ತಿಳಿದು ಬಂದಿದೆ. ಹಾಗಿದ್ದ ಪಕ್ಷದಲ್ಲಿ ರಾಹುಲ್ ಟ್ವೀಟ್ ಮಾಡಿದ್ದರೂ ಅದನ್ನು ಡಿಲೀಟ್ ಮಾಡಿರಬಹುದು ಇಲ್ಲವೇ ರಾಹುಲ್  ಅವರು ಟ್ವೀಟ್ ಮಾಡಿರದೇ ಇದ್ದರೂ ನಕಲಿ ಟ್ವೀಟ್ ಸೃಷ್ಟಿಸಿರಬಹುದು. ರಾಹುಲ್ ಗಾಂದಿ ಇಂಧನ ದರ ಏರಿಕೆಯನ್ನು ಖಂಡಿಸಿ ಮಾಡಿದ್ದ ಟ್ವೀಟ್ ಒಂದರ ಸ್ಕ್ರೀನ್ ಶಾಟ್ ತೆಗೆದು ಪರೇಶ್ ರಾವಲ್ ಟ್ವೀಟ್ ಮಾಡಿದ್ದ ಹಾಗೂ ವೈರಲ್ ಆಗಿರುವ ಸ್ಕ್ರೀನ್ ಶಾಟ್ ಅನ್ನು Altnews.in  ಪರಿಶೀಲಿಸಿತ್ತು. ಇದಕ್ಕಾಗಿ Altnews.in ಕೆಂಪು ಬಣ್ಣದ ಗೆರೆಯೊಂದನ್ನು ಎರಡೂ ಸ್ಕ್ರೀನ್ ಶಾಟ್ ಗಳ ಎಡ ಬದಿಗೆ ಸೇರಿಸಿ ಟೆಕ್ಸ್ಟ್ ಎಲೈನ್ಮೆಂಟ್ ಪರಿಶೀಲನೆ ನಡೆಸಿತ್ತು.

Altnews.in ತೆಗೆದಿದ್ದ ಸ್ಕ್ರೀನ್ ಶಾಟ್ ನಲ್ಲಿ ಡಿಸ್ ಪ್ಲೇ ಚಿತ್ರ, ಟೆಕ್ಸ್ಟ್ ಹಾಗು ಟ್ವೀಟ್ ನ ಕೆಳಭಾಗದಲ್ಲಿದ್ದ ಟೈಮ್ ಸ್ಟ್ಯಾಂಪ್ ಪಕ್ಕ ಎಡಭಾಗದಲ್ಲಿ ಮೂಡಿ ಬಂದಿದ್ದರೆ. ಪರೇಶ್ ರಾವಲ್ ಅವರ ಸ್ಕ್ರೀನ್ ಶಾಟ್ ಪರಿಶೀಲಿಸಿದಾಗ ಅದರಲ್ಲಿ ಎಳೆಯಲಾಗಿದ್ದ ಕೆಂಪು ಗೆರೆ ಡಿಸ್ಪ್ಲೇ ಚಿತ್ರದ ಮೂಲಕ ಹಾದು ಹೋಗುತ್ತದೆಯಲ್ಲದೆ ಚಿತ್ರ, ಟ್ವೀಟ್ ಹಾಗೂ ಕೆಳ ಭಾಗದ ಟೈಮ್ ಸ್ಟ್ಯಾಂಪ್ ನಿರ್ದಿಷ್ಟ ರೇಖೆಯಲ್ಲಿರಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ನಕಲಿ ಟ್ವೀಟ್ ಒಂದನ್ನು ನಂಬಿ ಪರೇಶ್ ರಾವಲ್ ಕೆಟ್ಟಿದ್ದಾರೆ.

ಅವರು ಈ ರೀತಿ  ಪ್ರಮಾದ ನಡೆಸಿರುವುದು ಇದೇ ಮೊದಲ ಬಾರಿಯಲ್ಲ. ಲೇಖಕಿ ಅರುಂಧತಿ ರಾಯ್ ಅವರು ಭಾರತೀಯ ಸೇನೆಯನ್ನು ಟೀಕಿಸಿದ್ದಾರೆಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ ಎಂಬ ನಕಲಿ ಸುದ್ದಿಯನ್ನು ನಂಬಿ ಟ್ವೀಟ್ ಮಾಡಿದ್ದ ಪರೇಶ್ `ಅರುಂಧತಿ ರಾಯ್ ಅವರನ್ನು ಭಾರತೀಯ ಸೇನೆ ಜೀಪಿಗೆ ಕಟ್ಟಬೇಕೆಂದು ಹೇಳಿದ್ದರು. ಭಾರತೀಯ ಸೇನೆ ಶಾಮೀಲಾಗಿದ್ದ ಹಾಗೂ ವಿವಾದಕ್ಕೀಡಾಗಿದ್ದ ಮಾನವ ಗುರಾಣಿ ಪ್ರಕರಣದ ಬೆನ್ನಲ್ಲಿ ಈ ಟ್ವೀಟ್ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News