×
Ad

ಅಂಕಲ್, ದಯವಿಟ್ಟು ನಿಮ್ಮ ರೇಶನ್ ಮತ್ತು ಬಟ್ಟೆಗಳನ್ನು ವಾಪಸ್ ಕೊಂಡೊಯ್ಯುತ್ತೀರಾ?

Update: 2018-05-26 21:31 IST

ಮಾನ್ಯರೇ, ಅಸ್ಸಲಾಂ ಅಲೈಕುಮ್

ನನ್ನ ಹೆಸರು ಕನೀಝ್. ನಾವು ನಿಮ್ಮ ಆಫೀಸಿನ ಹಿಂಬದಿಯ ಗಲ್ಲಿಯಲ್ಲಿ ವಾಸಿಸುವವರು. ಕೆಲವು ದಿನಗಳ ಹಿಂದೆ ನೀವು ನಮ್ಮ ಗುಡಿಸಲಿಗೆ ಭೇಟಿ ಕೊಟ್ಟಿದ್ದೀರಿ. ನಾವು ಬಡವರು ಹೌದೋ ಅಲ್ಲವೋ ಎಂಬುದನ್ನು ಪರೀಕ್ಷಿಸಲು ಮತ್ತು ಬಡವರು ಹೌದೆಂದಾದರೆ ನಮಗೆ ಆರ್ಥಿಕ ಸಹಾಯ ನೀಡಲು. ಆ ಬಳಿಕ ನೀವು ಪುನಃ ಐದಾರು ಜನರೊಂದಿಗೆ ನಮ್ಮ ಮನೆಗೆ ಭೇಟಿಕೊಟ್ಟು ನಮಗೆ ಕೆಲವು ರೇಶನ್ ಸಾಮಗ್ರಿಗಳನ್ನು ಕೊಟ್ಟಿರಿ, ನನಗೂ, ನನ್ನ ತಮ್ಮ ಮತ್ತು ತಾಯಿಗೂ ಹಬ್ಬದ ಉಡುಪುಗಳನ್ನು ಕೊಟ್ಟು ನಿಮ್ಮೆಲ್ಲರ ಜೊತೆಯಲ್ಲಿ ನಿಂತು ನಿಮ್ಮ ಕೈಗಳಿಂದ ನಾವು ಆ ಕೊಡುಗೆಗಳನ್ನು ಸ್ವೀಕರಿಸುವ ಫೋಟೊ ಕ್ಲಿಕ್ಕಿಸಿ ಹೊರಟು ಹೋದಿರಿ.

ಅಂಕಲ್, ನಿಮಗೆ ತಿಳಿದಿರಬಹುದು. ನಾನು ನಾಲ್ಕು ವರ್ಷದವಳಾಗಿದ್ದಾಗ ನನ್ನ ತಂದೆ ತೀರಿಕೊಂಡರು. ಅಪ್ಪನ ಮರಣದ ನಂತರ ಅಜ್ಜಿ ನನ್ನ ತಾಯಿಯನ್ನು ಸತಾಯಿಸಿ ಮನೆಯಿಂದ ಹೊರಹಾಕಿದರು. ಆಗ ನನ್ನ ತಮ್ಮ ಅಮ್ಮನ ಹೊಟ್ಟೆಯಲ್ಲಿದ್ದ ಮತ್ತು ನಾನು 4 ವರ್ಷದ ಸಣ್ಣ ಮಗುವಾಗಿದ್ದೆ. ನನ್ನ ತಾಯಿ ನನ್ನನ್ನು ಹೊತ್ತುಕೊಂಡು ಮನೆ ಮನೆಗೆ ಅಲೆದಾಡಿದರು. ನಮ್ಮ ಸಂಬಂಧಿಕರಾರೂ ನಮ್ಮ ನೆರವಿಗೆ ಬರಲಿಲ್ಲ. ನಮ್ಮನ್ನು ಯಾರೂ ಕೇಳುವವರಿರಲಿಲ್ಲ. ಆಗ ನನ್ನಮ್ಮ ಮನೆ ಮನೆಗೆ ಹೋಗಿ ಚಾಕರಿ ಮಾಡಿ ನಮ್ಮ ಹೊಟ್ಟೆ ತುಂಬುತ್ತಿದ್ದಳು. ಹೊಟ್ಟೆಯಂತೂ ಅಮ್ಮ ಕೆಲಸ ಮಾಡುತ್ತಿದ್ದ ಮನೆಗಳ ಯಜಮಾನರ ಬೈಗುಳ ತಿಂದು ತುಂಬುತ್ತಿತ್ತು.

ಅಮ್ಮ ನನ್ನ ಮುಂದೆ ನಗುತ್ತಲೇ ಇರುತ್ತಿದ್ದಳು. ಆದರೆ ರಾತ್ರಿ ಒಬ್ಬಳೇ ಕೂತು ಅಳುತ್ತಿದ್ದಳು.

ನಿನ್ನೆ ನನ್ನಮ್ಮ ತುಂಬಾ ಅಳುತ್ತಿದ್ದಳು. ಯಾಕೆಂದೇ ಅರ್ಥವಾಗಿಲ್ಲ. ಆಕೆ ಸುಮ್ಮನೇ ಹಾಗೆ ಅಳುವವಳಲ್ಲ. ಅತ್ತೂ ಅತ್ತೂ ಕಣ್ಣೀರು ಬತ್ತಿತ್ತೋ ಏನೋ, ಆಕೆ ಅಲ್ಲಿಯೇ ಮಲಗಿಬಿಟ್ಟಳು. ನಾನು ಹೋಗಿ ಅಮ್ಮನಿಗೆ ಸ್ವಲ್ಪ ಸುಖ ಸಿಗಲೆಂದು ಆಕೆಯ ಕಾಲುಗಳನ್ನು ಒತ್ತಲಾರಂಭಿಸಿದೆ. ಕಾಲು ಒತ್ತುತ್ತಿದ್ದಂತೆ ನನ್ನ ದೃಷ್ಟಿ ಅಮ್ಮನ ಕೈಯಲ್ಲಿದ್ದ ಪತ್ರಿಕೆಯ ಮೇಲೆ ಬಿತ್ತು. ಅದರಲ್ಲಿ ನಾನು ಮತ್ತು ನನ್ನಮ್ಮ, ನನ್ನ ಚಿಕ್ಕ ತಮ್ಮನೊಂದಿಗೆ ನಿಮ್ಮೆಲ್ಲರ ಕೈಯಿಂದ ರೇಶನ್ ಮತ್ತು ಬಟ್ಟೆ ಸ್ವೀಕರಿಸುವ ಫೋಟೊ ಇತ್ತು. ಅದರಲ್ಲಿ ನಮಗೆ ಇಂತಿಷ್ಟು ಅಕ್ಕಿ, ಧಾನ್ಯ ಮತ್ತು ಎಲ್ಲರಿಗೂ ಒಂದು ಜೊತೆ ಹಬ್ಬಕ್ಕಾಗಿ ಬಟ್ಟೆ ಕೊಡಲಾಯಿತೆಂದು ಬರೆದಿತ್ತು.

ಅಮ್ಮ ಅಳುತ್ತಿದ್ದುದೇಕೆ ಎಂದು ನನಗರ್ಥವಾಯಿತು. ಕಳೆದ ವರ್ಷವೂ ಹೀಗೆಯೇ ಆಗಿತ್ತು. ನೀವು ನಮಗೆ ರೇಷನ್ ಮತ್ತು ಬಟ್ಟೆಗಳನ್ನು ಕೊಟ್ಟು ಎಲ್ಲರ ಜೊತೆ ನಮ್ಮನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸಿ ಹೋಗಿದ್ದಿರಿ. ಆ ಬಳಿಕ ಅದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಹಬ್ಬದ ದಿನ ನಾವೊಂದು ತಮಾಷೆಯಾಗಿ ಬಿಟ್ಟಿದ್ದೆವು. ಹಬ್ಬದ ದಿನದ ನಮ್ಮ ಉಡುಪು ನೋಡಿ ಗಲ್ಲಿಯ ಮಕ್ಕಳೆಲ್ಲಾ ಕೇಳುತ್ತಿದ್ದರು. “ನಿಮಗೆ ದಾನವಾಗಿ ಸಿಕ್ಕಿದ ಉಡುಪು ಇದೇನಾ” ಎಂದು! ಎಲ್ಲರು ನಮ್ಮನ್ನು ‘ಭಿಕ್ಷುಕರು’ ಎಂಬ ದೃಷ್ಟಿಯಲ್ಲಿ ನೋಡುತ್ತಿದ್ದರು.

ದಯವಿಟ್ಟು ನೀವು ನಿಮ್ಮ ರೇಶನ್ ಮತ್ತು ಬಟ್ಟೆಯನ್ನು ವಾಪಸ್ ಕೊಂಡೊಯ್ಯಬೇಕು. ನನ್ನಿಂದ ನನ್ನಮ್ಮನ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ನಿಮ್ಮಿಂದಾಗಿ ನಮ್ಮ ತಾಯಿಯ ಕಣ್ಣಲ್ಲಿ ನೀರು ನೋಡಲಾಗುವುದಿಲ್ಲ. ಹಾಗೆ ನೋಡಿದರೆ ನಮ್ಮಂಥ ಬಡವರಿಗೆ ‘ಹಬ್ಬ’ ಎಂಬುವುದಿರುವುದಿಲ್ಲ.

ತಮ್ಮಲ್ಲಿ ನನ್ನದೊಂದು ವಿನಂತಿ. ನೀವು ಯಾವನೇ ಬಡವನಿಗೆ ಸಹಾಯ ಮಾಡುವಾಗ ದಯವಿಟ್ಟು ಅದರ ಫೋಟೋ ತೆಗೆದು ಪತ್ರಿಕೆ ಮತ್ತು ಸಾಮಾಜಿಕ ಜಾಣ ತಾಣಗಳಲ್ಲಿ ಹಾಕದಿರಿ. ಅದರಿಂದಾಗಿ ಬಡವರು ಅನುಭವಿಸುವ ಹಿಂಸೆ, ಅನುಭವ ನಿಮಗಿರುವುದಿಲ್ಲ. ನಮ್ಮ ಆಪ್ತ ಸಂಬಂಧಿಕರು ನಮ್ಮನ್ನು ತುಚ್ಛ ಭಾವನೆಯಿಂದ ನೋಡುತ್ತಾರೆ.

ದೇವರು ನಿಮ್ಮನ್ನು ಶ್ರೀಮಂತರಾಗಿ ಮಾಡಿದ್ದಾನೆ. ಅದರಲ್ಲಿ ನಿಮ್ಮ ‘ಕಮಾಲ್’ ಇರಬಹುದು. ಆದರೆ ದೇವರು ನಮ್ಮನ್ನು ಬಡವರನ್ನಾಗಿ ಮಾಡಿರುವುದರಲ್ಲಿ ನಮ್ಮ ತಪ್ಪೇನೂ ಇಲ್ಲ. ದಯವಿಟ್ಟು ದಾನ-ಧರ್ಮಗಳನ್ನು ಮಾಡಿ, ಅವುಗಳನ್ನು ಪ್ರಚಾರ ಮಾಡುವ ಮೂಲಕ ನಮ್ಮಂಥ ಬಡವರನ್ನು ಅವಮಾನಿಸಬೇಡಿ.

ದೇವರು ನಿಮ್ಮನ್ನು ಸುಖವಾಗಿಡಲಿ ಮತ್ತು ನಿಮ್ಮ ಶ್ರೀಮಂತಿಕೆಯನ್ನು ಹೆಚ್ಚಿಸಲಿ ಎಂಬ ಪ್ರಾರ್ಥನೆಯೊಂದಿಗೆ..

ಇಂತಿ, 

ಬಡ ತಾಯಿಯ ಮಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News