×
Ad

ಐಯರ್‌ಲ್ಯಾಂಡ್: ಗರ್ಭಪಾತ ವಿರೋಧಿ ಕಾಯ್ದೆ ರದ್ದತಿಗೆ ಶೇ.66ರಷ್ಟು ಜನಬೆಂಬಲ

Update: 2018-05-26 21:50 IST

ಡಬ್ಲಿನ್,ಮೇ 26: ಐಯರ್‌ಲ್ಯಾಂಡ್‌ನ ಕಠಿಣವಾದ ಗರ್ಭಪಾತ ವಿರೋಧಿ ಕಾಯ್ದೆಯನ್ನು ರದ್ದುಪಡಿಸುವ ಕುರಿತಾಗಿ ನಡೆದ ಜನಮತ ಸಂಗ್ರಹದ ಮೊದಲ ಹಂತದ ಫಲಿತಾಂಶ ಶನಿವಾರ ಸಂಜೆ ಪ್ರಕಟಗೊಂಡಿದೆ. ಜನಾಭಿಪ್ರಾಯ ಸಂಗ್ರಹದಲ್ಲಿ ಪಾಲ್ಗೊಂಡ ಶೇ.66ರಷ್ಟು ಮಂದಿ ಗರ್ಭಪಾತಕ್ಕೆ ಸಂವಿಧಾನಾತ್ಮಕವಾಗಿ ವಿಧಿಸಲಾಗಿದ್ದ ನಿಷೇಧವನ್ನು ರದ್ದುಪಡಿಸುವುದನ್ನು ಬೆಂಬಲಿಸಿದ್ದಾರೆ.

ಜನಮತ ಸಂಗ್ರಹ ನಡೆದ 40 ಕ್ಷೇತ್ರಗಳ ಪೈಕಿ ಮೊದಲ ನಾಲ್ಕು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಶೇ.66.36 ಮಂದಿ ಗರ್ಭಪಾತ ನಿಷೇಧದ ರದ್ದತಿಯನ್ನು ಬೆಂಬಲಿಸಿದ್ದಾರೆ ಹಾಗೂ ಶೇ. 33 ಮಂದಿ ವಿರೋಧಿಸಿದ್ದಾರೆ.

ಗರ್ಭಪಾತ ರದ್ದತಿಗೆ ಭಾರೀ ಜನಬೆಂಬಲ ದೊರೆತಿದೆಯೆಂದು ಜನಾಭಿಪ್ರಾಯ ಸಂಗ್ರಹದ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಿಸಿದ ಬೆನ್ನಲ್ಲೇ ಐಯರ್‌ಲ್ಯಾಂಡ್‌ನ ಗರ್ಭಪಾತ ವಿರೋಧಿ ಕಾನೂನನ್ನು ವಿರೋಧಿಸುತ್ತಿರುವ ಪ್ರಮುಖ ಸಂಘಟನೆ ‘ಸೇವ್‌ದಿ ಏಯ್ತಿ’ನ ಸಂವಹನ ನಿರ್ದೇಶಕ ಜಾನ್ ಮ್ಯಾಕ್‌ಗುರ್ಕ್, ಜನಾದೇಶದಲ್ಲಿ ತಾವು ಸೋಲುಂಡಿರುವುದಾಗಿ ಹೇಳಿಕೊಂಡಿದ್ದಾರೆ.

2012ರಲ್ಲಿ ಕರ್ನಾಟಕ ಮೂಲದ ದಂತವೈದ್ಯೆ, 31 ವರ್ಷ ವಯಸ್ಸಿನ ಸವಿತಾ ಹಾಲಪ್ಪನವರ್ ಗರ್ಭದಲ್ಲಿನ ಸಮಸ್ಯೆಯಿಂದಾಗಿ ತೀವ್ರವಾಗಿ ಅನಾರೋಗ್ಯಕ್ಕೀಡಾಗಿದ್ದರೂ ಐಯರ್‌ಲ್ಯಾಂಡ್‌ನ ಆಸ್ಪತ್ರೆಯೊಂದು ಗರ್ಭಪಾತ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಐಯರ್‌ಲ್ಯಾಂಡ್‌ನಲ್ಲಿ ಗರ್ಭಪಾತದ ನಿಷೇದದ ಕಠಿಣ ಕಾನೂನನ್ನು ರದ್ದುಪಡಿಸಲು ಆಗ್ರಹಿಸುವ ಚಳವಳಿಯು ತೀವ್ರಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News