ಪ್ರತ್ಯೇಕತಾವಾದಿ ಹುರಿಯತ್ ಒಪ್ಪಿದರೆ ಸರಕಾರ ಮಾತುಕತೆಗೆ ಸಿದ್ಧ: ರಾಜ್ ನಾಥ್ ಸಿಂಗ್
ಹೊಸದಿಲ್ಲಿ, ಮೇ 26: ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಮುಖಂಡರು ಒಪ್ಪಿದರೆ ಸರಕಾರ ಶಾಂತಿ ಮಾತುಕತೆಗೆ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಸಿಂಗ್ ತಿಳಿಸಿದ್ದಾರೆ. ಆದರೆ ಇದುವರೆಗೆ ಹುರಿಯತ್‌ನಿಂದ ಇಂತಹ ಸೂಚನೆ ಬಂದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಪಕ್ಷ(ಸಂಘಟನೆ) ಜೊತೆ ಮಾತುಕತೆಗೆ ಸಿದ್ಧ ಎಂದು ಈಗಾಗಲೇ ತಿಳಿಸಿದ್ದೇವೆ. ಹುರಿಯತ್ ಮುಂದೆ ಬಂದರೆ ಅವರೊಂದಿಗೆ ಮಾತುಕತೆ ನಡೆಸಲೂ ನಮ್ಮ ಅಭ್ಯಂತರವಿಲ್ಲ. ಯಾರು ಮಾತುಕತೆ ನಡೆಸಲು ಬಯಸಿದರೂ ನಾವು ಸಿದ್ಧ ಎಂದು ಟಿವಿ ವಾಹಿನಿಯೊಂದಿಗೆ ಮಾತನಾಡಿದ ರಾಜ್ ನಾಥ್ ಸಿಂಗ್ ತಿಳಿಸಿದ್ದಾರೆ.
ಸರಕಾರದ ವಿಶೇಷ ಪ್ರತಿನಿಧಿ ದಿನೇಶ್ವರ್ ಶರ್ಮ ಜಮ್ಮು-ಕಾಶ್ಮೀರದಲ್ಲಿ ಹಲವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಸಚಿವರು ಇದೇ ಸಂದರ್ಭ ತಿಳಿಸಿದರು. ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ಘೋಷಿಸಬೇಕು ಹಾಗೂ ಮಾತುಕತೆಯಲ್ಲಿ ಪಾಕಿಸ್ತಾನವನ್ನೂ ಸೇರಿಸಿಕೊಳ್ಳಬೇಕು ಎಂದು ಹುರಿಯತ್ ಕಾನ್ಫರೆನ್ಸ್ ಮುಖಂಡರು ಆಗ್ರಹಿಸಿದ್ದ ಕಾರಣ ಈ ಹಿಂದೆ ಸರಕಾರ ಹುರಿಯತ್ ಜತೆ ಆರಂಭಿಸಿದ ಮಾತುಕತೆ ಪ್ರತಿಕ್ರಿಯೆ ವಿಫಲವಾಗಿತ್ತು.