ನೋಟ್ ಬ್ಯಾನ್ ಬಗ್ಗೆ ಹೇಳಿಕೆ ನೀಡಿದ ನಿತೀಶ್ ಕುಮಾರ್: 4ನೇ ವರ್ಷಾಚರಣೆ ದಿನವೇ ಕೇಂದ್ರ ಸರಕಾರಕ್ಕೆ ಮುಜುಗರ

Update: 2018-05-27 09:03 GMT

ಪಾಟ್ನಾ, ಮೇ 27: ಮೋದಿ ಸರ್ಕಾರ ಕೈಗೊಂಡ ನೋಟುರದ್ದತಿ ನಿರ್ಧಾರವನ್ನು ದಿಟ್ಟ ಹೆಜ್ಜೆ ಎಂದು ಬಣ್ಣಿಸಿದ ಎರಡು ವರ್ಷಗಳ ಬಳಿಕ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದೀಗ ಯೂ-ಟರ್ನ್ ತೆಗೆದುಕೊಂಡಿದ್ದಾರೆ. ಇದೀಗ ಕುಮಾರ್, ಈ ಹೆಜ್ಜೆಯ ಲಾಭವೇನು ಎಂದು ಪ್ರಶ್ನಿಸಿದ್ದು, ನೋಟ್‍ಬಂಧಿ ಅವಧಿಯಲ್ಲಿ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಬ್ಯಾಂಕುಗಳು ನೆರವಾಗಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

"ನಾನು ನೋಟುರದ್ದತಿಯ ಬೆಂಬಲಿಗ. ಆದರೆ ಎಷ್ಟು ಮಂದಿಗೆ ಇದರಿಂದ ಲಾಭವಾಗಿದೆ?, ಕೆಲ ಪ್ರಭಾವಿ ವ್ಯಕ್ತಿಗಳು ತಮ್ಮ ನಗದನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ವರ್ಗಾಯಿಸಿದ್ದಾರೆ" ಎಂದು ಶನಿವಾರ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಅವರು ಪ್ರತಿಪಾದಿಸಿದ್ದಾರೆ.

ಬಿಜೆಪಿ ಮಿತ್ರಪಕ್ಷವಾದ ಜೆಡಿಯು ಅಧ್ಯಕ್ಷರೂ ಆಗಿರುವ ನಿತೀಶ್ ಕುಮಾರ್ ಅವರು, ಮೋದಿ ಸರ್ಕಾರದ ನೋಟುರದ್ದತಿಯ ಬಗ್ಗೆ ಪ್ರಶ್ನಿಸಿರುವುದು ಇದೇ ಮೊದಲು. ಕೇಂದ್ರ ಸರ್ಕಾರ ನಾಲ್ಕನೇ ವರ್ಷಾಚರಣೆಯ ಸಂಭ್ರಮದಲ್ಲಿರುವಾಗಲೇ ಕುಮಾರ್ ಹೊಸ ರಾಗ ತೆಗೆದಿರುವುದು ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದೆ.

ನಿತೀಶ್ ಹೇಳಿಕೆಯ ಬೆನ್ನಲ್ಲೇ ಸಭೆಯಲ್ಲಿ ಹಾಜರಿದ್ದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, "ನಿತೀಶ್ ಕುಮಾರ್ ಅವರು ನೋಟುರದ್ಧತಿಯ ಬೆಂಬಲಿಗ" ಎಂದು ಹಾನಿ ತಡೆಯುವ ಪ್ರಯತ್ನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News