“ಪ್ರವಾದಿ ಮುಹಮ್ಮದರು ಮನುಕುಲದ ಆಸ್ತಿ”

Update: 2018-05-27 09:36 GMT

ಮುಂಬೈ, ಮೇ 27: ಧರ್ಮಗಳ ನಡುವೆ ಅಪನಂಬಿಕೆ, ಹಿಂಸಾಚಾರದಂತಹ ಘಟನೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಮುಂಬೈನ ಬ್ರಾಹ್ಮಣ ಪಂಡಿತರೊಬ್ಬರು ಪ್ರವಾದಿ ಮುಹಮ್ಮದರ ಬಗ್ಗೆ ಬರೆದಿರುವ ಶಾಯರಿಗಳು ಎಲ್ಲರ ಗಮನಸೆಳೆಯುತ್ತಿದೆ. ಇಲ್ಲಿನ ಪಂಡಿತ್ ರಾಮಸಾಗರ್ ಪೃಥ್ವಿಪಾಲ್ ತ್ರಿಪಾಠಿ ಎಂಬವರು ‘ಸಾಯಿಬಾನ್ ಎ ರಹ್ಮತ್’ ಎಂಬ ವಿಶಿಷ್ಟ ಶಾಯರಿಗಳ ಸಂಕಲನ ಹೊರತಂದಿದ್ದ, ಪ್ರವಾದಿ ಮುಹಮ್ಮದರನ್ನು ಸ್ಮರಿಸಿದ್ದಾರೆ.

68 ವರ್ಷದ ತ್ರಿಪಾಠಿ ಅಯೋಧ್ಯೆಯ ರಾಮ್ ಲಲ್ಲಾ ವಿನ್ಯಾಸ್ ಟ್ರಸ್ಟಿ ಕುಟುಂಬಸ್ಥರು. ಇವರು ವಿಶ್ವ ಬ್ರಾಹ್ಮಣ ಪರಿಷತ್‍ನ ಅಧ್ಯಕ್ಷರೂ ಆಗಿದ್ದಾರೆ. ಇವರದ್ದು ಕವಿಗೋಷ್ಠಿಗಳಲ್ಲಿ ಪರಿಚಿತ ಮುಖ. ಸಾಮಾನ್ಯವಾಗಿ ಪ್ರವಾದಿ ಮುಹಮ್ಮದರ ಸಂದೇಶಗಳನ್ನು ಸಾರುವ ಮೂಲಕವೇ ಅವರು ತಮ್ಮ ಕವಿಗೋಷ್ಠಿಯನ್ನು ಆರಂಭಿಸುತ್ತಾರೆ..

ಇವರ ಮನೆಯಲ್ಲಿ ಹತ್ತು ಹಲವು ಪ್ರಶಸ್ತಿ ಫಲಕಗಳಿವೆ. ಜೊತೆಗೆ ಕುರ್ ಆನ್, ಪ್ರವಾದಿ ಮುಹಮ್ಮದರ ಜೀವನಚರಿತ್ರೆ, ಭಗವದ್ಗೀತೆ ಹಾಗೂ ರಾಮಾಯಣಗಳೂ ಇವೆ. ಇಷ್ಟೇ ಅಲ್ಲದೆ ಮುಸ್ಲಿಂ ಅತಿಥಿಗಳಿಗಾಗಿಯೇ ಮೀಸಲಾದ ಪ್ರಾರ್ಥನಾ ಚಾಪೆಗಳಿವೆ.

ತ್ರಿಪಾಠಿಯವರ ಕವನ ಸಂಕಲನಗಳು ಇಸ್ಲಾಂ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ ಪ್ರವಾದಿ ಮುಹಮ್ಮದರನ್ನು ಸ್ಮರಿಸುವುದು ಮಾತ್ರವಲ್ಲದೇ, ಶಾಂತಿ ಮತ್ತು ಕೋಮು ಸಾಮರಸ್ಯದ ಬಗೆಗಿನ ಅವರ ನಿಷ್ಠೆಯನ್ನೂ ತೋರಿಸುತ್ತದೆ. ಉರ್ದು ಹಾಗೂ ದೇವನಾಗರಿ ಲಿಪಿಯ ಇವರ ಪದ್ಯಗಳು ಭಾರತದ ಸಂಯುಕ್ತ ಸಂಸ್ಕೃತಿಗೆ ಹಿಡಿದ ಕನ್ನಡಿಯಂತಿವೆ.

ಪ್ರವಾದಿ ಮುಹಮ್ಮದರು ಕೇವಲ ಮುಸ್ಲಿಮರಿಗಷ್ಟೇ ಸೀಮಿತವಲ್ಲ. ಅವರು ಮನುಕುಲದ ಆಸ್ತಿ. ಅವರ ಅನುಗ್ರಹ ಪಡೆಯುವಲ್ಲಿ ತಪ್ಪೇನೂ ಇಲ್ಲ ಎನ್ನುವುದು ಪಂಡಿತ್ ಪೃಥ್ವಿಪಾಲ್ ತ್ರಿಪಾಠಿಯವರ ಅನಿಸಿಕೆ. ಇದನ್ನು ಅವರು ಒಂದು ದ್ವಿಪದಿಯಲ್ಲಿ ಮನೋಜ್ಞವಾಗಿ ಬಿಂಬಿಸಿದ್ದಾರೆ.  

ಹಿಂದೂ-ಮುಸ್ಲಿಮರು ಪರಸ್ಪರ ಸಹಿಷ್ಣುತೆ, ಸಹಬಾಳ್ವೆ ಹಾಗೂ ಸಹಕಾರದಿಂದ ಬಾಳಬೇಕು ಎನ್ನುತ್ತಾರೆ ರಾಮ- ರಹೀಮ ಸಿದ್ಧಾಂತದ ಪ್ರತಿಪಾದಕರಾದ ಪಂಡಿತ್ ಪೃಥ್ವಿಪಾಲ್ ತ್ರಿಪಾಠಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News