ಗಡಿ ನಿಯಂತ್ರಣ ರೇಖೆಯುದ್ದಕ್ಕೂ 5,500 ಬಂಕರ್‌ಗಳು, 200 ಸಮುದಾಯ ಭವನಗಳ ನಿರ್ಮಾಣ

Update: 2018-05-27 12:52 GMT

ಶ್ರೀನಗರ, ಮೇ 27: ಪಾಕಿಸ್ತಾನಿ ಸೈನಿಕರ ಗುಂಡಿನ ದಾಳಿ ಮತ್ತು ಶೆಲ್ಲಿಂಗ್‌ನಿಂದ ಸ್ಥಳೀಯ ನಿವಾಸಿಗಳನ್ನು ರಕ್ಷಿಸುವ ಉದ್ದೇಶದಿಂದ ನಿಯಂತ್ರಣ ರೇಖೆಯುದ್ದಕ್ಕೂ 5,500 ಬಂಕರ್‌ಗಳು ಹಾಗೂ 200 ಸಮುದಾಯ ಭವನಗಳು ಮತ್ತು ಗಡಿ ಭವನಗಳನ್ನು ನಿರ್ಮಿಸುವ ಕಾರ್ಯವನ್ನು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಆಡಳಿತ ಕೈಗೆತ್ತಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುಗಿಸಬೇಕೆಂದು ಉದ್ದೇಶಿಸಲಾಗಿರುವ ಪ್ರತಿಷ್ಠಿತ ಯೋಜನೆಗೆ 153.60 ಕೋಟಿ ರೂ. ವೆಚ್ಚ ತಗಲಲಿದೆ. ಈ ಯೋಜನೆಗೆ ರಾಜ್ಯ ಸರಕಾರ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅನುಮೋದನೆ ನೀಡಿದೆ ಎಂದು ರವಿವಾರದಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಭಿವೃದ್ಧಿ ಆಯಕ್ತರಾದ ಶಹೀದ್ ಇಕ್ಬಾಲ್ ಚೌದರಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕದನ ವಿರಾಮ ಉಲ್ಲಂಘನೆಯ ಸಮಯದಲ್ಲಿ ಗಡಿ ನಿವಾಸಿಗಳನ್ನು ರಕ್ಷಿಸಲು ನಿರ್ಮಿಸಲಾಗುತ್ತಿರುವ ಕೌಟುಂಬಿಕ ಬಂಕರ್‌ಗಳು, ಸಮುದಾಯ ಬಂಕರ್‌ಗಳು, ಸಮುದಾಯ ಭವನಗಳು ಮತ್ತು ಗಡಿ ಭವನಗಳ ನಿರ್ಮಾಣದ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ನಿಯಂತ್ರಣ ರೇಖೆಯ 120 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಸುಂದರ್‌ಬನಿ, ಕಿಲ ದ್ರಹಲ್, ನೌಶೇರ, ದೂಂಗಿ, ರಜೌರಿ, ಪಂಜ್‌ಗ್ರೈನ್ ಮತ್ತು ಮನಜಕೋಟೆ ಮುಂತಾದ ಪ್ರದೇಶಗಳಲ್ಲಿ 5,196 ಬಂಕರ್‌ಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯ ಮೊದಲ ಹಂತದಲ್ಲಿ ಎಲ್‌ಒಸಿಯ 0-3 ಕಿ.ಮೀ ವ್ಯಾಪ್ತಿಯಲ್ಲಿ ಜೀವಿಸುತ್ತಿರುವ ಕುಟುಂಬಗಳಿಗೆ ವೈಯಕ್ತಿಕ ಕುಟುಂಬ ಬಂಕರ್‌ಗಳನ್ನು ನೀಡಲಾಗುವುದು. ಇನ್ನು ಸಮುದಾಯ ಬಂಕರ್‌ಗಳು ಮತ್ತು ಭವನಗಳನ್ನು ಕಡ್ಡಾಯವಾಗಿ ಶಾಲೆಗಳು, ಆಸ್ಪತ್ರೆ, ಪೊಲೀಸ್ ಠಾಣೆ, ಸರಕಾರಿ ಕಟ್ಟಡಗಳು ಮತ್ತು ಪಂಚಾಯತ್ ಕಟ್ಟಡಗಳ ಬಳಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News