ಕೇಂದ್ರ ಸರಕಾರದ ಕೆಟ್ಟ ನೀತಿಗಳಿಂದ ಹಣದುಬ್ಬರ, ನಿರುದ್ಯೋಗ ಸಮಸ್ಯೆ ಹೆಚ್ಚಿದೆ: ಅಖಿಲೇಶ್

Update: 2018-05-27 12:59 GMT

ಲಕ್ನೊ, ಮೇ 27: ಶನಿವಾರದಂದು ಕೇಂದ್ರದ ನರೇಂದ್ರ ಮೋದಿ ಸರಕಾರ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಜೊತೆಯಾಗಿ ವಾಗ್ದಾಳಿ ನಡೆಸಿದ್ದು ಕೇಂದ್ರ ಸರಕಾರವು ಎಲ್ಲ ವಿಷಯಗಳಲ್ಲೂ ವಿಫಲವಾಗಿದೆ ಎಂದು ದೂರಿದೆ.

ಕೇಂದ್ರದ ಅವ್ಯವಸ್ಥೆಯ ಬಗ್ಗೆ ಬಿಎಸ್‌ಪಿ ನಾಯಕಿ ಮಾಯಾವತಿ ಟೀಕಾ ಪ್ರಹಾರ ಮಾಡಿದ್ದರೆ ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಕೇಂದ್ರದ ಕೆಟ್ಟ ನೀತಿಗಳಿಂದ ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿಯವರು ತಮ್ಮೆಲ್ಲಾ ಕೆಲಸಗಳನ್ನು ಐತಿಹಾಸಿಕ ಎಂದು ಕರೆಯುತ್ತಾರೆ. ಬಹುಶಃ ಅದೇ ಕಾರಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಐತಿಹಾಸಿಕ ಏರಿಕೆಯನ್ನು ಕಂಡಿದೆ ಮತ್ತು ಜನರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಮಾಯಾವತಿ ಕುಟುಕಿದ್ದಾರೆ.

ಲಕ್ನೊದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ಪಿ ನಾಯಕಿ ತೈಲಬೆಲೆಯನ್ನು ನಿಯಂತ್ರಿಸದಿದ್ದರೆ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮೋದಿಯವರ ಅಪ್ರಬುದ್ಧ ನಿರ್ಧಾರಗಳಾದಂತಹ ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದಾಗಿ ಬಡತನ, ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯಲ್ಲಿ ಏರಿಕೆಯಾಗಿದೆ. ಡಾಲರ್ ಮುಂದೆ ರುಪಾಯಿ ಮೌಲ್ಯ ಕೂಡಾ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸರಕಾರ ಅವ್ಯವಸ್ಥೆ ಮತ್ತು ಅರಾಜಕತೆಯು ಬಿಜೆಪಿ ಆಡಳಿತ ನಿಜಾರ್ಥದಲ್ಲಿ ಜಂಗಲ್‌ರಾಜ್ ಎಂಬುದನ್ನು ಸಾಬೀತುಪಡಿಸಿದೆ ಎಂದು ಮಾಯಾವತಿ ತಿಳಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಜನರನ್ನು ನಿರಾಶಗೊಳಿಸಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News