ಬಂದ್ ಕರೆ ಬಿಜೆಪಿಯ ಬ್ಲಾಕ್‌ಮೇಲ್ ತಂತ್ರ: ಐವನ್ ಡಿಸೋಜ

Update: 2018-05-28 07:51 GMT

ಮಂಗಳೂರು, ಮೇ 28: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಬಂದ್‌ಗೆ ಕರೆ ನೀಡಿರುವುದು ಬ್ಲಾಕ್‌ಮೇಲ್ ತಂತ್ರ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್ ಡಿಸೋಜ ಆಕ್ಷೇಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಬಂದ್‌ಗೆ ಕರೆ ನೀಡಿದ್ದರೂ ರೈತರು ಬೀದಿಗಿಳಿದಿಲ್ಲ. ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಮಯ ನೀಡಲು ನಿರ್ಧರಿಸಿದ್ದಾರೆ. ಇದರಿಂದಾಗಿ ಬಿಜೆಪಿ ಬಂದ್ ಕರೆ ಸಂಪೂರ್ಣ ವಿಫಲವಾಗಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಂತ ಬಲದಲ್ಲಿ ಸರಕಾರ ರಚನೆ ಮಾಡಿದರೆ ಸಾಲ ಮನ್ನಾ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿದೆ. ಆದರೆ ಅವರು ಸಾಲ ಮನ್ನಾ ಮಾಡುವುದಿಲ್ಲ ಎಂದು ಹೇಳಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಇತರ ನಾಯಕರ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಬೇಕಿದೆ. ಇದು ಜನತೆಗೆ, ರೈತರಿಗೂ ಅರ್ಥವಾಗಿದೆ. ಆದರೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಏನೂ ಮಾಡಿಲ್ಲ. ವಿರೋಧ ಪಕ್ಷವಾಗಿದ್ದಾಗಲೂ ಏನೂ ಮಾಡದೆ ಇದೀಗ ಸುಮ್ಮನೆ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದೆ. ಹಿಂದೆ ಬಿಜೆಪಿಯ ನಾಯಕರಾದ ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್, ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾವನ್ನು ಕೇಂದ್ರ ಸರಕಾರದಿಂದ ನಾವು ಮಾಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ ಎಂದು ಐವನ್ ಡಿಸೋಜ ಹೇಳಿದರು.

ಸಮ್ಮಿಶ್ರ ಸರಕಾರದ ಮೈತ್ರಿಯನ್ನು ಅಪವಿತ್ರ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿಗೆ 104 ಸ್ಥಾನವನ್ನು ಜನತೆ ನೀಡಿದ್ದರು. ಸರಕಾರ ರಚಿಸಲು ಅವಕಾಶ ನೀಡಲಾಗಿತ್ತು. ಆದರೆ ಯಡಿಯೂರಪ್ಪ ವಿಶ್ವಾಸಮತವನ್ನು ಎದುರಿಸದೆಯೇ ಓಡಿ ಹೋದರು. ಬಿಜೆಪಿಗೆ ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನ ಸಿಕ್ಕಿರಬಹುದು. ಆದರೆ ರಾಜ್ಯದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಶೇ.1.8ರಷ್ಟು ಮತ ಗಳಿಕೆಯಲ್ಲಿ ಮುಂದಿದೆ ಎಂದರು.

ಜಿಲ್ಲೆಯಲ್ಲಿ ಯಾವ ಕಾರಣಗಳಿಗಾಗಿ ಕಾಂಗ್ರೆಸ್‌ಗೆ ಈ ಸೋಲು ಎಂಬುದರ ಬಗ್ಗೆ ಚರ್ಚಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಕೋಮುಗಲಭೆಗೆ ಹೆಚ್ಚು ಪ್ರಚಾರವನ್ನು ಬಿಜೆಪಿ ನೀಡಿದ್ದೂ ಇದಕ್ಕೆ ಕಾರಣವಾಗಿದೆ. ಸಮ್ಮಿಶ್ರ ಸರಕಾರದ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಆ ತಪ್ಪನ್ನು ಸರಿಪಡಿಸಲಾಗುವುದು ಎಂದವರು ಹೇಳಿದರು.

ಸಚಿವ ಸ್ಥಾನದ ಅವಕಾಶ ಸಿಕ್ಕರೆ ಕೆಲಸ ಮಾಡಲು ಬದ್ಧ

ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಸಿಗಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ, ನಿರೀಕ್ಷೆ ಇದ್ದೇ ಇರುತ್ತದೆ. ಅವಕಾಶ ಕೊಟ್ಟರೆ ಕೆಲಸ ಮಾಡಲು ಬದ್ಧ. ಎರಡು ವರ್ಷ ವಿಧಾನ ಪರಿಷತ್‌ನ ಮುಖ್ಯ ಸಚೇತಕನಾಗಿ ಕಾರ್ಯನಿರ್ವಹಿಸಿದ ಅನುಭವವೂ ಇದೆ ಎಂದು ಐವನ್ ಡಿಸೋಜ ನುಡಿದರು. ಸುದ್ದಿಗೋಷ್ಠಿಯಲ್ಲಿ ಅಶೋಕ್ ಡಿ.ಕೆ., ಪುನೀತ್ ಶೆಟ್ಟಿ, ಸಿರಿಲ್ ಡಿಸೋಜ, ಹಬೀಬ್ ಕಣ್ಣೂರು, ಜ್ಞಾನೇಶ್, ಮುದಸ್ಸಿರ್ ಕುದ್ರೋಳಿ, ನಝೀರ್ ಬಜಾಲ್ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News