ಸಾಲಮನ್ನಾ: ಉಡುಪಿಯಲ್ಲಿ ಬಿಜೆಪಿ ಪ್ರತಿಭಟನಾ ಮೆರವಣಿಗೆ

Update: 2018-05-28 08:07 GMT

ಉಡುಪಿ, ಮೇ 28: ಜೆಡಿಎಸ್ ಮೈತ್ರಿ ಸರಕಾರ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ ಮಾತು ತಪ್ಪಿದೆ ಎಂದು ಆರೋಪಿಸಿ ಸೋಮವಾರ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿ ಚುನಾವಣೆಗೆ ಮೊದಲು ನೀಡಿದ ಪ್ರಮುಖ ಭರವಸೆ ಗಳಲ್ಲಿ ಒಂದಾದ ರೈತರ ಸಾಲಮನ್ನಾ ಮಾಡದೆ ವಚನಭ್ರಷ್ಟರಾಗಿದ್ದಾರೆ. ಆದುದರಿಂದ ರೈತರ ಸಾಲಮನ್ನಾ ತಕ್ಷಣವೇ ಮಾಡುವ ಮೂಲಕ ರೈತರಿಗೆ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಈ ಪ್ರತಿಭಟನೆಯ ಮೆರವಣಿಗೆಯನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವುದಾಗಿ ವಚನ ನೀಡಿತ್ತು. ಆದರೆ ನಮಗೆ ಬಹುಮತ ಸಿಗದ ಕಾರಣ ಅಧಿಕಾರ ನಡೆಸಲು ಆಗಿಲ್ಲ. ಆದರೆ ನಂತರ ಅಧಿಕಾರಕ್ಕೆ ಬಂದ ಜೆಡಿಎಸ್ ಮೈತ್ರಿ ಸರಕಾರ ಸಾಲಮನ್ನಾ ಮಾಡದೆ ಮಾತು ತಪ್ಪಿದೆ. ಕುಮಾರಸ್ವಾಮಿ ಕಾಂಗ್ರೆಸ್‌ನ ಮುಲಾಜಿನಲ್ಲಿ ಮುಖ್ಯಮಂತ್ರಿಯಾಗಿರು ವುದು ನಾಚಿಕೆಗೇಡು ಎಂದು ಟೀಕಿಸಿದರು.

ಜೋಡುಕಟ್ಟೆಯಿಂದ ಆರಂಭಗೊಂಡ ಮೆರವಣಿಗೆ ಕೋರ್ಟ್ ರಸ್ತೆ, ಡಯಾನ ಸರ್ಕಲ್, ಕೆ.ಎಂ.ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ರಾಘವೇಂದ್ರ ಉಪ್ಪೂರು, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ, ರಾಘವೇಂದ್ರ ಕಿಣಿ, ನರಸಿಂಹ ನಾಯಕ್, ಹರೀಶ್ ರಾಂ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News