ಇವಿಎಂ ವೈಫಲ್ಯದ ಬಗ್ಗೆ ‘ಅತಿರಂಜಿತ’ ಹೇಳಿಕೆ ಬೇಡ: ಚುನಾವಣಾ ಆಯೋಗ

Update: 2018-05-28 14:36 GMT

ಹೊಸದಿಲ್ಲಿ, ಮೇ 28: ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸಂದರ್ಭ ಭಾರೀ ಪ್ರಮಾಣದಲ್ಲಿ ಇವಿಎಂ(ವಿದ್ಯುನ್ಮಾನ ಮತಯಂತ್ರ) ವೈಫಲ್ಯ ಕಂಡುಬಂದಿತ್ತು ಎಂಬ ವರದಿ ವಾಸ್ತವ ಸ್ಥಿತಿಯನ್ನು ಅತಿರಂಜಿತವಾಗಿ ಹೇಳಿರುವುದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇವಿಎಂ ವೈಫಲ್ಯ ಅಪರೂಪದ ಘಟನೆಯಾಗಿದೆ. ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಸಂದರ್ಭ ಆಯೋಗವು ಸಾಕಷ್ಟು ಎವಿಎಂ ಹಾಗೂ ವಿವಿಪ್ಯಾಟ್‌ಗಳ ಮೀಸಲು ಸಂಗ್ರಹ ಹೊಂದಿರುತ್ತದೆ.ಒಂದು ಮತದಾನ ಕೇಂದ್ರದ ಮತದಾನ ಯಂತ್ರದಲ್ಲಿ ದೋಷ ಕಂಡು ಬಂದರೆ ತಕ್ಷಣ ಅದನ್ನು ಬದಲಿಸಲು ಇದರಿಂದ ಸಾಧ್ಯವಾಗುತ್ತದೆ. ಮೀಸಲು ಇವಿಎಂಗಳನ್ನು ಕ್ಷೇತ್ರ ಅಧಿಕಾರಿಗಳ ಉಸ್ತುವಾರಿಯಲ್ಲಿ ಇಡಲಾಗುತ್ತದೆ. ಇವರು ದೋಷಪೂರಿತ ಯಂತ್ರಗಳನ್ನು ಬದಲಿಸುತ್ತಾರೆ. ಒಬ್ಬ ಕ್ಷೇತ್ರಾಧಿಕಾರಿಗೆ ಸಾಮಾನ್ಯವಾಗಿ 10ರಿಂದ 12ರಷ್ಟು ಮತದಾನ ಕೇಂದ್ರದ ನಿರ್ವಹಣೆ ವಹಿಸಿರುವುದರಿಂದ, ಇವಿಎಂ/ವಿವಿಪ್ಯಾಟ್ ಯಂತ್ರಗಳನ್ನು 30 ನಿಮಿಷದೊಳಗೆ ಬದಲಾಯಿಸಬಹುದಾಗಿದೆ. ಮತಯಂತ್ರಗಳನ್ನು ಬದಲಿಸುವುದರಿಂದ ಮತದಾನ ಪ್ರಕ್ರಿಯೆಯ ವಿಶ್ವಾಸಾರ್ಹತೆ ಅಥವಾ ಸಮಗ್ರತೆಗೆ ಯಾವ ವಿಧದಲ್ಲೂ ಕುಂದು ಉಂಟಾಗುವುದಿಲ್ಲ ಎಂದು ಆಯೋಗ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಭಂದಾರ-ಗೊಂಡಿಯಾ ಲೋಕಸಭಾ ಕ್ಷೇತ್ರದ 35 ಮತದಾನ ಕೇಂದ್ರಗಳಲ್ಲಿ ಮತದಾನ ರದ್ದು ಮಾಡಲಾಗಿದೆ ಎಂಬ ವರದಿಯನ್ನು ಆಯೋಗ ತಿರಸ್ಕರಿಸಿದೆ. ಈ ಕ್ಷೇತ್ರದ ಶೇ.25ರಷ್ಟು ಮತದಾನ ಕೇಂದ್ರಗಳಲ್ಲಿ ಎವಿಎಂ/ವಿವಿಪ್ಯಾಟ್‌ಗಳಲ್ಲಿ ದೋಷ ಕಂಡುಬಂದಿದೆ ಎಂಬ ವರದಿಯೂ ಸತ್ಯವಲ್ಲ. ಸೂಕ್ತ ಬದಲಾವಣೆ ಬಳಿಕ ಈ ಕ್ಷೇತ್ರದಲ್ಲಿ ಮತದಾನ ಸುಸೂತ್ರವಾಗಿ ಮುಂದುವರಿದಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಮತದಾನ ಪ್ರಕ್ರಿಯೆಗೆ ಅಡ್ಡಿಯಾಗಿದೆ ಎಂದು ಮತದಾನ ಕೇಂದ್ರದ ಅಧಿಕಾರಿಗಳಿಂದ ಮಾಹಿತಿ ದೊರೆತ ತಕ್ಷಣ ಈ ಬಗ್ಗೆ ಗಮನ ಹರಿಸಲಾಗುತ್ತದೆ. ಚುನಾವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿಯು ಮತಯಂತ್ರಗಳಲ್ಲಿ ಕಂಡು ಬಂದಿರುವ ಸಮಸ್ಯೆಯ ಮೂಲಕಾರಣವನ್ನು ಪತ್ತೆಹಚ್ಚಿ, ಮತದಾನ ಪ್ರಕ್ರಿಯೆ ಸುಸೂತ್ರವಾಗಿ ಮುಂದುವರಿಯಲು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಆಯೋಗದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News