ಅರುಣ್ ಜೇಟ್ಲಿ ಕ್ಷಮೆ ಕೋರಿದ ಕುಮಾರ್ ವಿಶ್ವಾಸ್

Update: 2018-05-28 14:37 GMT

ಹೊಸದಿಲ್ಲಿ, ಮೇ 28: ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಭಿನ್ನಮತೀಯ ‘ಆಪ್’(ಆಮ್ ಆದ್ಮಿ ಪಕ್ಷ) ಶಾಸಕ ಕುಮಾರ್ ವಿಶ್ವಾಸ್ ಕ್ಷಮೆ ಕೋರಿರುವುದನ್ನು ದಿಲ್ಲಿ ಹೈಕೋರ್ಟ್ ಮಾನ್ಯ ಮಾಡಿದೆ.

ಬಿಜೆಪಿ ಮುಖಂಡ ಜೇಟ್ಲಿ ವಿರುದ್ಧ ತಾನು ಮಾಡಿರುವ ಆರೋಪಗಳನ್ನು ನಿಶ್ಯರ್ತವಾಗಿ ವಾಪಸು ಪಡೆದಿರುವುದಾಗಿ ಕುಮಾರ್ ವಿಶ್ವಾಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಪತ್ರವನ್ನು ನ್ಯಾಯಮೂರ್ತಿ ರಾಜೀವ್ ಸಹಾಯ್ ಪರಿಗಣಿಸಿದರು. ಜೇಟ್ಲಿ ಮತ್ತವರ ಕುಟುಂಬದವರಿಗೆ ತಮ್ಮಿಂದ ಏನಾದರೂ ತೊಂದರೆಯಾಗಿದ್ದಲ್ಲಿ ಆ ಬಗ್ಗೆ ಕ್ಷಮೆ ಯಾಚಿಸುವುದಾಗಿ ತಮ್ಮ ವಕೀಲರ ಮೂಲಕ ಸಲ್ಲಿಸಿರುವ ಪತ್ರದಲ್ಲಿ ವಿಶ್ವಾಸ್ ತಿಳಿಸಿದ್ದಾರೆ.

ವಿಶ್ವಾಸ್ ಸಲ್ಲಿಸಿರುವ ಕ್ಷಮಾಯಾಚನೆಯನ್ನು ತಾವು ಒಪ್ಪಿಕೊಂಡಿರುವುದಾಗಿ ಜೇಟ್ಲಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅರುಣ್ ಜೇಟ್ಲಿ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಸಂದರ್ಭ ಭಾರೀ ಹಣಕಾಸಿನ ಅವ್ಯವಹಾರ ನಡೆಸಿದ್ದರು ಎಂದು ‘ಆಪ್’ ಮುಖಂಡ ಅರವಿಂದ್ ಕೇಜ್ರಿವಾಲ್ ಹಾಗೂ ಇತರ ಐವರು ಆಪ್ ನಾಯಕರು ಆರೋಪಿಸಿದ್ದರು. ಇದನ್ನು ತಳ್ಳಿಹಾಕಿದ್ದ ಜೇಟ್ಲಿ, ಆಪ್ ಮುಖಂಡರ ವಿರುದ್ಧ 2015ರ ಡಿಸೆಂಬರ್‌ನಲ್ಲಿ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಬಳಿಕ ಕುಮಾರ್ ವಿಶ್ವಾಸ್ ಹೊರತುಪಡಿಸಿ, ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ, ಸಂಜಯ್ ಸಿಂಗ್, ಅಶುತೋಷ್ ಮತ್ತು ದೀಪಕ್ ಬಾಜ್‌ಪಾಯ್ ನಿಶ್ಯರ್ತ ಕ್ಷಮೆ ಯಾಚಿಸಿದ್ದರು.

ಇದೀಗ ಭಿನ್ನಮತೀಯ ಆಪ್ ಶಾಸಕ ಕುಮಾರ್ ವಿಶ್ವಾಸ್ ಕ್ಷಮೆ ಯಾಚಿಸಿದ್ದು, ಈ ಪ್ರಕರಣವನ್ನು ಮುಂದುವರಿಸಿಕೊಂಡು ಹೋಗಲು ತನಗೆ ವೈಯಕ್ತಿಕವಾಗಿ ಆಸಕ್ತಿಯಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News