ಸರಕಾರಿ ಬಂಗಲೆ ತೆರವುಗೊಳಿಸಲು ಕಾಲಾವಕಾಶ: ಮುಲಾಯಂ ಸಿಂಗ್, ಅಖಿಲೇಶ್ ಯಾದವ್ ಸುಪ್ರೀಂ ಕೋರ್ಟ್‌ಗೆ ಮನವಿ

Update: 2018-05-28 14:43 GMT

ಹೊಸದಿಲ್ಲಿ, ಮೇ 28: ಉತ್ತರಪ್ರದೇಶ ಸರಕಾರ ಮಂಜೂರು ಮಾಡಿದ ತಮ್ಮ ಸರಕಾರಿ ಬಂಗಲೆಯನ್ನು ತೆರವುಗೊಳಿಸಲು ಸೂಕ್ತ ಸಮಯಾವಕಾಶ ಕೋರಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಪುತ್ರ ಅಖಿಲೇಶ್ ಯಾದವ್ ಸೋಮವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ಅಧಿಕಾರ ಕಳೆದುಕೊಂಡ ಬಳಿಕವೂ ಮಾಜಿ ಮುಖ್ಯಮಂತ್ರಿಗೆ ವಾಸ್ತವ್ಯ ಉಳಿಸಿಕೊಳ್ಳಲು ಅವಕಾಶ ನೀಡಲು ರಾಜ್ಯ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಈ ಕಾಯ್ದೆಗೆ ಮೇ 7ರಂದು ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಮನವಿ ಸಲ್ಲಿಸಿದ್ದಾರೆ. ಲಕ್ನೋದಲ್ಲಿರುವ ತಮ್ಮ ಸರಕಾರಿ ಬಂಗಲೆಯನ್ನು ತೆರವುಗೊಳಿಸಲು ಹಾಗೂ ಖಾಸಗಿ ವಾಸ್ತವ್ಯವನ್ನು ವರ್ಗಾಯಿಸಲು ಎರಡು ವರ್ಷಗಳ ಕಾಲಾವಕಾಶ ಕೋರಿ ತಂದೆ ಹಾಗೂ ಮಗ ಈ ಹಿಂದೆ ಉತ್ತರಪ್ರದೇಶ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮಾಜಿ ಮುಖ್ಯಮಂತ್ರಿ ತಮ್ಮ ವಕೀಲ ಗರಿಮಾ ಬಜಾಜ್ ಮೂಲಕ ಸಲ್ಲಿಸಿದ ಮನವಿಯಲ್ಲಿ ಸರಕಾರಿ ಬಂಗಲೆ ತೆರವುಗೊಳಿಸಲು ಸೂಕ್ತ ಸಮಯಾವಕಾಶ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News