ಸಂಸ್ಕೃತ ವಿವಿಯಿಂದ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳಿಗೆ 1 ಕೋಟಿ ರೂ. ಮೊತ್ತದ ಸ್ಕಾಲರ್‌ಷಿಪ್
ಜಮ್ಮು, ಮೇ 28: ಉತ್ತರಪ್ರದೇಶದ ಸಂಸ್ಕೃತ ವಿಶ್ವವಿದ್ಯಾನಿಲಯವು ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳಿಗೆ 1 ಕೋಟಿ ರೂ. ಮೊತ್ತದ ಸ್ಕಾಲರ್‌ಶಿಪ್ ನೀಡುವುದಾಗಿ ಘೋಷಿಸಿದೆ.
ವಿವಿಯಲ್ಲಿ ವೈವಿಧ್ಯಮಯವಾದ ಹೊಸ ಕೋರ್ಸ್‌ಗಳಿದ್ದು ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಖಚಿತ ಉದ್ಯೋಗಾವಕಾಶದ ಭರವಸೆ ನೀಡುತ್ತಿದ್ದೇವೆ. ವಿವಿಯ ಮಥುರಾ ಕ್ಯಾಂಪಸ್‌ನಲ್ಲಿ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಉನ್ನತ ಅಧ್ಯಯನ ನಡೆಸಲು ಅನುಕೂಲ ಮಾಡಿಕೊಡಲಾಗುತ್ತದೆ. ಇದೇ ಮೊದಲ ಬಾರಿಗೆ ವಿವಿಯಲ್ಲಿ ಪ್ರವೇಶಾವಕಾಶವನ್ನು ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ ಎಂದು ವಿವಿಯ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಸಿ.ಛಾಬ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಉತ್ತರ ಭಾರತದ ಪ್ರಮುಖ ಖಾಸಗಿ ವಿವಿಗಳಲ್ಲಿ ಒಂದಾಗಿರುವ ಸಂಸ್ಕೃತ ವಿವಿಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದವರು ತಿಳಿಸಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನತೆಯ ಸಮಾನ ವಿಕಾಸಕ್ಕೆ ನೆರವಾಗುವ ಪ್ರಯತ್ನದ ಭಾಗವಾಗಿ ಜಮ್ಮು-ಕಾಶ್ಮೀರದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1 ಕೋಟಿ ರೂ. ಮೊತ್ತದ ಸ್ಕಾಲರ್‌ಶಿಪ್ ನೀಡಲು ನಿರ್ಧರಿಸಲಾಗಿದೆ ಎಂದು ವಿವಿಯ ಪ್ರಧಾನ ವ್ಯವಸ್ಥಾಪಕ ಅಭಿಷೇಕ್ ಶುಕ್ಲ ತಿಳಿಸಿದ್ದಾರೆ.