ತೀಸ್ತಾ ಸೆಟಲ್ವಾಡ್ ಬಂಧನದ ವಿರುದ್ಧ ತಡೆಯಾಜ್ಞೆ ಜೂ.13ರವರೆಗೆ ವಿಸ್ತರಣೆ

Update: 2018-05-28 15:54 GMT

ಅಹ್ಮದಾಬಾದ್,ಮೇ 28: 1.4 ಕೋ.ರೂ.ದುರುಪಯೋಗ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ಬಂಧನದ ವಿರುದ್ಧ ನೀಡಿರುವ ತಡೆಯಾಜ್ಞೆಯ ಅವಧಿಯನ್ನು ಜೂನ್ 13ರವರೆಗೆ ವಿಸ್ತರಿಸಿ ಗುಜರಾತ್ ಉಚ್ಚ ನ್ಯಾಯಾಲಯವು ಸೋಮವಾರ ಆದೇಶಿಸಿದೆ.

ನ್ಯಾ.ಎ.ಕೆ.ಯೋಗಿ ಅವರ ಪೀಠದ ಕಲಾಪಗಳ ಪಟ್ಟಿಯಲ್ಲಿ ಪ್ರಕರಣವನ್ನು ಸೇರಿಸಲಾಗಿತ್ತಾದರೂ,ಅವರು ಅದರ ವಿಚಾರಣೆಯಿಂದ ದೂರವಿರಲು ನಿರ್ಧರಿಸಿದ ಬಳಿಕ ವಿಚಾರಣೆಯನ್ನು ಕೈಗತ್ತಿಕೊಂಡಿದ್ದ ನ್ಯಾ.ಬೀರೇನ್ ವೈಷ್ಣವ ಅವರ ಪೀಠವು ಮಧ್ಯಂತರ ತಡೆಯಾಜ್ಞೆಯನ್ನು ಜೂ.13ರವರೆಗೆ ವಿಸ್ತರಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂ.12ಕ್ಕೆ ನಿಗದಿಗೊಳಿಸಲಾಗಿದೆ.

 ಬಾಂಬೆ ಉಚ್ಚ ನ್ಯಾಯಾಲಯವು ಸೆಟಲ್ವಾಡ್ ಮತ್ತು ಆನಂದ್ ಅವರ ಬಂಧನದ ವಿರುದ್ಧ ನೀಡಿದ್ದ ತಡೆಯಾಜ್ಞೆ ಮತ್ತು ತಾತ್ಕಾಲಿಕ ನಿರೀಕ್ಷಣಾ ಜಾಮೀನಿನ ಅವಧಿಯನ್ನು ಸರ್ವೋಚ್ಚ ನ್ಯಾಯಾಲಯವು ಕಳೆದ ತಿಂಗಳು ಮೇ 2ರಿಂದ ಮೇ 31ರವರೆಗೆ ವಿಸ್ತರಿಸಿತ್ತು ಮತ್ತು ಅದಕ್ಕೂ ಮುನ್ನ ಗುಜರಾತ್‌ನ ಸಕ್ಷಮ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅವರಿಗೆ ಸೂಚಿಸಿತ್ತು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸರ್ವ ಶಿಕ್ಷಾ ಅಭಿಯಾನದಡಿ 2010 ಮತ್ತು 2013ರ ನಡುವೆ ತಮ್ಮ ಎನ್‌ಜಿಒ ಸಬ್‌ರಂಗ್ ಟ್ರಸ್ಟ್‌ಗೆ ಅನುದಾನವಾಗಿ ಮಂಜೂರು ಮಾಡಿದ್ದ 1.4 ಕೋ.ರೂ.ಗಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಆರೋಪಿಸಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ತಮ್ಮ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ಕೆಳ ನ್ಯಾಯಾಲಯವು ತಿರಸ್ಕರಿಸಿದ ಬಳಿಕ ದಂಪತಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ದೂರುದಾರ ರಯೀಸ್ ಪಠಾಣ್ ಅವರು ಈ ವರ್ಷದ ಮಾ.30ರಂದು ಸೆಟಲ್ವಾಡ್ ಮತ್ತು ಆನಂದ್ ವಿರುದ್ಧ ಈ ಎಫ್‌ಐಆರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News