1.50 ಲಕ್ಷ ದನಗಳನ್ನು ಸಾಯಿಸಲಿರುವ ನ್ಯೂಜಿಲ್ಯಾಂಡ್ ಸರಕಾರ

Update: 2018-05-28 16:38 GMT

ವೆಲ್ಲಿಂಗ್ಟನ್,ಮೇ 28: ಜಾನುವಾರುಗಳಲ್ಲಿ ಬ್ಯಾಕ್ಟೀರಿಯಾದಿಂದ ಸೋಂಕು ರೋಗ ಹರಡುವ ಭೀತಿಯ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್ ಸರಕಾರವು ಸುಮಾರು 1.50 ಲಕ್ಷ ದನಗಳನ್ನು ಸಾಯಿಸುವ ನಿರ್ಧಾರವನ್ನು ಕೈಗೊಂಡಿದೆ. ನ್ಯೂಜಿಲ್ಯಾಂಡ್‌ನಲ್ಲಿ ಅಂದಾಜು 1 ಕೋಟಿ ದನಗಳಿದ್ದು, ಅಲ್ಲಿನ ಜನಸಂಖ್ಯೆಗಿಂತ ಎರಡು ಪಟ್ಟು ಅಧಿಕವಾಗಿವೆ. ಅವುಗಳಲ್ಲಿ ಮೂರನೆ ಎರಡರಷ್ಟು ಹಾಲಿಗಾಗಿ ಸಾಕುವ ದನಗಳಾದರೆ, ಉಳಿದವು ಬೀಫ್ ದನಗಳಾಗಿವೆ.

1.50 ಲಕ್ಷಕ್ಕೂ ಅಧಿಕ ದನಗಳನ್ನು ಸಾಯಿಸುವುದರಿಂದ ದೇಶದ ಆರ್ಥಿಕತೆಗೆ ನೂರಾರು ಕೋಟಿ ಡಾಲರ್ ನಷ್ಟವಾಗಲಿದೆ. ಆದರೆ ದೇಶದಲ್ಲಿ ಇದೇ ಮೊದಲ ಬಾರಿಗೆ ಹರಡಿರುವ ಮೈಕೊಪ್ಲಾಸ್ಮಾ ಬೊವಿಸ್ ಸೋಂಕು ರೋಗವನ್ನು ಮೂಲೋತ್ಪಾಟನೆ ಮಾಡಲು ಸಾಧ್ಯವಾಗಲಿದೆಯೆಂದು ಹೈನುಗಾರಿಕೆ ಉದ್ಯಮಿಗಳು ಅಭಿಪ್ರಾಯಿಸಿದ್ದಾರೆ.

  ಕಳೆದ ಜುಲೈನಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲ್ಯಾಂಡ್‌ನ ಜಾನುವಾರುಗಳಲ್ಲಿ ಮೈಕ್ರೊಪ್ಲಾಸ್ಮಾ ಬೊವಿಸ್ ಸೋಂಕು ರೋಗ ಪತ್ತೆಯಾಗಿತ್ತು. ಈ ಹಿಂದೆ ಯುರೋಪ್ ಹಾಗೂ ಅಮೆರಿಕದಲ್ಲಿ ಕಾಣಿಸಿಕೊಂಡಿದ್ದ ಈ ಬ್ಯಾಕ್ಟೀರಿಯಾ ದನಗಳಲ್ಲಿ ನ್ಯೂಮೊನಿಯಾ, ಅರ್ಥರೈಟಿಸ್ ಮತ್ತಿತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆಹಾರ ಸುರಕ್ಷತೆಗೆ ಈ ಬ್ಯಾಕ್ಟೀರಿಯಾದಿಂದ ಹಾನಿಯಿಲ್ಲವಾದರೂ, ಉತ್ಪಾದನಾ ಪ್ರಮಾಣದಲ್ಲಿ ಭಾರೀ ನಷ್ಟವನ್ನುಂಟು ಮಾಡುತ್ತದೆ.

ಮೈಕೊಪ್ಲಾಸ್ಮಾ ಬೊವಿಸ್ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಯಾವುದೇ ಜಾನುವಾರು ಫಾರ್ಮ್‌ಗಳಲ್ಲಿನ ಎಲ್ಲಾ ದನಗಳನ್ನು ಸಾಯಿಸುವ ಯೋಜನೆಯನ್ನು ತಾವು ಹೊಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಕ್ಟೀರಿಯಾ ಸೋಂಕು ಪತ್ತೆಯಾಗಿರುವ ಫಾರ್ಮ್‌ಗಳ ಜಾನುವಾರುಗಳನ್ನು ಕಸಾಯಿ ಖಾನೆಗಳಲ್ಲಿ ಕೊಂದ ಬಳಿಕ, ಅವುಗಳನ್ನು ಅನುಮೋದನೆ ಪಡೆದ ಪ್ರದೇಶದಲ್ಲಿ ಹೂತುಹಾಕಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News