ಸುಳ್ಳು ಸುದ್ದಿ ಹರಡಿದ ಮೋದಿಯ ಕಟ್ಟಾ ಅಭಿಮಾನಿ ಮಧು ಕಿಶ್ವರ್ ಗೆ ಜಮ್ಮು ಕಾಶ್ಮೀರ ಪೊಲೀಸರ ತರಾಟೆ

Update: 2018-05-29 09:55 GMT

ಹೊಸದಿಲ್ಲಿ, ಮೇ 29: “ಬುರ್ಹಾನ್ ವಾನಿಯ ಹತ್ಯೆಯಿಂದ ಮೆಹಬೂಬಾಮುಫ್ತಿ ಅವರಿಗೆ ಅಸಮಾಧಾನವಾಗಿದೆಯೆಂಬ ಕಾರಣಕ್ಕೆ ಜಮ್ಮು ಕಾಶ್ಮೀರದ ಡಿಜಿ ಎಸ್‍ಪಿ ವೈದ್ ಅವರು  ಬುರ್ಹಾನ್ ವಾನಿಯನ್ನು ಎನ್ ಕೌಂಟರ್ ನಲ್ಲಿ ಕೊಂದ ಎಸ್‍ಪಿಯನ್ನು ವಜಾಗೊಳಿಸಿದ್ದಾ. ಈ ಸುದ್ದಿಯನ್ನು ನೀಲಕಂಠ ಅವರಿಂದ ತಿಳಿದು ಆಘಾತವಾಗಿತ್ತು. ಜಿಹಾದಿ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಡಿಜಿ - ಐಪಿಎಸ್ ತರಬೇತಿ ಇದೇ ಏನು?''….. ಹೀಗೆಂದು ಸಾಮಾಜಿಕ ಕಾರ್ಯಕರ್ತೆ ಮಧು ಕಿಶ್ವರ್ ಟ್ವೀಟ್ ಒಂದನ್ನು ಮಾಡಿದ್ದರು.

ಟ್ವಿಟರ್ ನಲ್ಲಿ ಬರುವ ದೃಢೀಕೃತವಲ್ಲದ, ನಕಲಿ ಮಾಹಿತಿಯನ್ನು ಹರಡುವಲ್ಲಿ ಹಲವು ಬಾರಿ ಸುದ್ದಿಯಾಗಿರುವ ಅವರು ಈ ಮೇಲಿನ ಮಾಹಿತಿ ತಮಗೆ ನೀಲಕಂಠ ಎಂಬ ಟ್ವಿಟರ್ ಹ್ಯಾಂಡಲ್ ಹೊಂದಿರುವ ಸುಶೀಲ್ ಪಂಡಿತ್ ಎಂಬ ವ್ಯಕ್ತಿಯಿಂದ ದೊರಕಿತ್ತು ಎಂಬುದನ್ನೂ ಹೇಳಿಕೊಂಡಿದ್ದಾರಲ್ಲದೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ‘ಜಿಹಾದಿ ರಾಜಕಾರಣಿ’ಯೆಂದೂ ಬಣ್ಣಿಸಿದ್ದಾರೆ.

ಆದರೆ ಕೂಡಲೇ ಈ ಬಗ್ಗೆ ಪ್ರತಿಕ್ರಿಯಿಸಿದ ಜಮ್ಮು ಕಾಶ್ಮೀರ ಪೊಲೀಸರು ಟ್ವೀಟ್, ಎಸ್‍ಪಿ ವಜಾ ಸುದ್ದಿಯನ್ನು ನಿರಾಕರಿಸಿದ್ದಾರಲ್ಲದೆ  ಮಧು ಕಿಶ್ವರ್ ಅವರ ಟ್ವೀಟ್ ಬಗ್ಗೆ ಆಘಾತ ವ್ಯಕ್ತಪಡಿಸಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ನಿಮ್ಮಂತಹ ಹಿರಿಯ ಪತ್ರಕರ್ತರು ಸುಳ್ಳು ಸುದ್ದಿಗಳನ್ನು ಹರಡುವುದು ಮತ್ತಷ್ಟು ಆಘಾತ ನೀಡಿದೆ. ಯಾವ ಎಸ್ಪಿಯನ್ನೂ ವಜಾಗೊಳಿಸಿಲ್ಲ. ಇಂತಹ ಮಾಹಿತಿ ಶೇರ್ ಮಾಡುವ ಮುನ್ನ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ" ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮಧು ಕಿಶ್ವರ್ ಅವರಂತೆ ಸುಶೀಲ್ ಪಂಡಿತ್ ಎಂಬಾತ ಕೂಡ ದೃಢೀಕೃತವಲ್ಲದ ಮಾಹಿತಿಗಳನ್ನು ಶೇರ್ ಮಾಡಿದ್ದ. ಪಾಂಪೋರ್ ನಲ್ಲಿ ಸಿಆರ್‍ಪಿಎಫ್ ಸಿಬ್ಬಂದಿ ಮೇಲೆ ಉಗ್ರ ದಾಳಿ ನಡೆದು ಐದು ಮಂದಿ ಸಾವಿಗೀಡಾಗಿದ್ದಾರೆಂಬ ನಕಲಿ ಸುದ್ದಿಯನ್ನು ಕಳೆದ ವಾರ ಪ್ರಕಟಿಸಿದ್ದಕ್ಕಾಗಿ ಜಮ್ಮು  ಕಾಶ್ಮೀರ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಹೈವ್ ಕಮ್ಯುನಿಕೇಶನ್ಸ್ ಮಾಲಕನಾಗಿರುವ ಈತ ಬಿಜೆಪಿ ಜತೆಗೂ ಅದರ ಸಂವಹನ ತಂತ್ರಗಾರಿಕೆಯ ವಿಚಾರದಲ್ಲಿ ಕೆಲಸ ಮಾಡಿದ್ದ. ಟಿವಿ ಚರ್ಚಾ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದ.  ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಡೆ ಗಾರ್ಡಿಯನ್ ನಲ್ಲಿ ಪ್ರಕಟವಾದ ಈತನ ಲೇಖನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಆದರೆ ಈ ಪ್ರಕರಣದಲ್ಲಿ ಈತನ ಟ್ವಿಟರ್ ಟೈಮ್ ಲೈನ್ ನಲ್ಲಿ ಎಸ್‍ಪಿ ವಜಾ ಸುದ್ದಿಯ ಮಾಹಿತಿಯೇ ಇರಲಿಲ್ಲ. ಈತ ಈ ಸುಳ್ಳು ಮಾಹಿತಿಯನ್ನು ಮಧು ಕಿಶ್ವರ್ ಜತೆ ಹಂಚಿಕೊಂಡಿದ್ದನೇ?, ಹೌದೆಂದಾದರೆ ಹೇಗೆ ಎಂಬ ಪ್ರಶ್ನೆಯೂ ಇದೆ.

ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಪೊಲೀಸರಿಂದ ತರಾಟೆಗೊಳಗಾಗಿರುವ ಕಿಶ್ವರ್ ಇದೀಗ ಸಬೂಬು ನೀಡಲು ಹೊರಟಿದ್ದಾರೆ. ಆದರೆ ತಮ್ಮ ವಿವಾದಿತ ಟ್ವೀಟ್ ಅನ್ನು ಡಿಲೀಟ್ ಕೂಡ ಮಾಡದ ಅವರು ಅದಕ್ಕಾಗಿ ವಿಷಾದ ಕೂಡ ವ್ಯಕ್ತಪಡಿಸಿಲ್ಲ.

ಕೃಪೆ: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News