ಉಡುಪಿಯಲ್ಲಿ ಮುಂದುವರಿದ ಗಾಳಿ-ಮಳೆ ಅಬ್ಬರ: ವ್ಯಾಪಕ ಹಾನಿ

Update: 2018-05-29 10:39 GMT

ಉಡುಪಿ, ಮೇ 29: ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಗುಡುಗು‌ ಮಿಂಚು ಸಹಿತ ಮಳೆ ಹಲವಾರು ಅನಾಹುತಗಳನ್ನು ಸೃಷ್ಟಿ ಮಾಡಿದೆ.

ರಾತ್ರಿ ಹೊತ್ತಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಜಿಲ್ಲಾದ್ಯಾಂತ ಹಲವು ಮರಗಳು ಧರೆಗುರುಳಿವೆ. ಕೆಲವೊಂದು‌ ಮರಗಳು ಮನೆ ಮೇಲೆ ಉರುಳಿದ್ದು ಅಪಾರ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.

ರಸ್ತೆ ಬದಿಗಳಲ್ಲಿ ಇದ್ದ ಮರಗಳು ವಿದ್ಯುತ್ ತಂತಿಗಳ ಮೇಲೆ  ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಮೆಸ್ಕಾಂ ಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ವಿದ್ಯುತ್ ಕಂಬಗಳು ಧರಾಶಾಹಿಯಾಗಿರುವುದರಿಂದ‌ ಉಡುಪಿಯ ಹೆಚ್ಚಿನ‌ ಕಡೆಗಳಲ್ಲಿ ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲ್ಲಲ್ಲಿ ಕಳೆಯುವಂತಾಗಿದೆ.

ಬೃಹತ್ ಕಂಬಗಳು ಹಾಗೂ ಮರಗಳು ರಸ್ತೆಗುರುಳಿರುವ ಪರಿಣಾಮ ಹಲವು ಕಡೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. 
ಉದ್ಯಾವರ ಕೊರಂಗ್ರಪಾಡಿ ವಿಜಯಬ್ಯಾಂಕ್ ಬಳಿಯ ನಿವಾಸಿ ಇಂದಿರಾ ಎಂಬವರ ಮನೆಗೆ ಮರವೊಂದು ಉರುಳಿ ಬಿದ್ದು ಹಾನಿಯಾಗಿದೆ. ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಮನೆಯ ಒಂದು ಪಾರ್ಶ್ವಕ್ಕೆ ಬೃಹತ್ ಮರ ಉರುಳಿ ಬಿದ್ದಿದೆ. ಹೀಗಾಗಿ ಮನೆಯ ಛಾವಣಿ ಕುಸಿದಿದೆ. ಸುಮಾರು 3 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. 
-------------------

ಕನ್ನರ್ಪಾಡಿ: 

ಉದ್ಯಾವರ ಕನ್ನರ್ಪಾಡಿಯಲ್ಲಿ ಮನೆಯೊಂದಕ್ಕೆ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ. ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಘಟನೆಯಿಂದಾಗಿ ಮನೆಯ ಒಂದು ಪಾರ್ಶ್ವ ಸಂಪೂರ್ಣ ಕುಸಿದಿದೆ. ಸುಮಾರು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 

-------------------
ಅಂಬಲಪಾಡಿ
ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಉಡುಪಿ ಅಂಬಲಪಾಡಿಯ ದಲಿತ ಕಾಲನಿಯಲ್ಲೂ ಮರಗಳು ಧರೆಗೆ ಉರುಳಿವೆ. ಹೀಗಾಗಿ ಸುಮಾರು 5 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಘಟನೆಯಿಂದಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News