ಕೇರಳದ ಮರ್ಯಾದಾ ಹತ್ಯೆ; ಪ್ರಮುಖ ಆರೋಪಿಯ ಬಂಧನ

Update: 2018-05-29 17:02 GMT

ಕೊಟ್ಟಯಂ, ಮೇ 29: ಮರ್ಯಾದಾ ಹತ್ಯೆ ಎಂದು ಸಂಶಯಿಸಲಾಗಿರುವ ಪ್ರಕರಣದಲ್ಲಿ ಯುವಕನ್ನು ಹತ್ಯೆ ಮಾಡಿದ ಆರೋಪದಲ್ಲಿ ಆತನ ಪತ್ನಿಯ ತಂದೆ ಮತ್ತು ಸಹೋದರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಕೊ ಜಾನ್ (50) ಮತ್ತು ಆತನ ಮಗ ಸ್ಯಾನು ಚಾಕೊ (26) ಬಂಧಿತ ಆರೋಪಿಗಳು. ಇವರು ಕೆವಿನ್ ಪಿ. ಜೋಸೆಫ್ ಎಂಬ ಯುವಕನನ್ನು ಹತ್ಯೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಮೃತನ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಿಂದೇಟು ಹಾಕಿರುವ ಕಾರಣಕ್ಕೆ ಪಿಣರಾಯಿ ವಿಜಯನ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಕೊಟ್ಟಯಂನಲ್ಲಿ ನಡೆಸಿದ ಬಂದ್ ಆಚರಣೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆಯ ನಂತರ ಭೂಗತವಾಗಿದ್ದ ಆರೋಪಿ ತಂದೆ ಮತ್ತು ಮಗ ಉತ್ತರ ಕಣ್ಣೂರು ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರು ಈ ಪ್ರಕರಣದ ಹದಿನಾಲ್ಕು ಆರೋಪಿಗಳ ಪೈಕಿ ಪ್ರಮುಖರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆವಿನ್ ಜೋಸೆಫ್ ಎಂಬ ದಲಿತ ಕ್ರೈಸ್ತನನ್ನು ರವಿವಾರ ಅಪಹರಣ ಮಾಡಲಾಗಿ ನಂತರ ಹತ್ಯೆ ಮಾಡಲಾಗಿತ್ತು. ಆತನ ಮೃತದೇಹ ಸೋಮವಾರದಂದು ಕೊಲ್ಲಂ ಜಿಲ್ಲೆಯ ನದಿಯಲ್ಲಿ ಪತ್ತೆಯಾಗಿತ್ತು. ಕೆವಿನ್ ಮತ್ತು ಆತನ ಪ್ರೇಯಸಿ ವಿವಾಹಕ್ಕಾಗಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಹಾಕಿದ ಎರಡು ದಿನಗಳ ನಂತರ ಕೆವಿನ್ ಹತ್ಯೆ ನಡೆದಿದೆ ಎಂದು ಆತನ ಸಂಬಂಧಿಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News