ಉತ್ತರ ಪ್ರದೇಶ : ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಬರೇಲಿ, ಮೇ 30: ಉತ್ತರ ಪ್ರದೇಶದ ಬದೌನ್ ನ ಬಿಜೆಪಿ ಶಾಸಕ ಕುಶಾಗ್ರ ಸಾಗರ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಬಿಜೆಪಿ ಶಾಸಕ ಸಾಗರ್ ಎರಡು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
“ನನ್ನ ತಾಯಿ ಆತನ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಸಹಾಯಕ್ಕೆಂದು ಅಲ್ಲಿಗೆ ಹೋಗುತ್ತಿದ್ದೆ. ಮದುವೆಯಾಗುವುದಾಗಿ ಭರವಸೆ ನೀಡಿದ ಬಿಜೆಪಿ ಶಾಸಕ ನನ್ನ ಮೇಲೆ 2 ವರ್ಷಗಳ ಕಾಲ ಅತ್ಯಾಚಾರವೆಸಗಿದ. ಆದರೆ ಇದೀಗ ಶಾಸಕನಾದ ನಂತರ ಮದುವೆಯಾಗಲು ನಿರಾಕರಿಸುತ್ತಿದ್ದಾನೆ.” ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ನ್ಯಾಯ ದೊರಕದಿದ್ದಲ್ಲಿ ಆತ್ಮಹತ್ಯೆಗೈಯುವುದಾಗಿ ಬೆದರಿಕೆಯೊಡ್ಡಿದ್ದಾರೆ. “ನ್ಯಾಯ ಸಿಗದಿದ್ದರೆ ನಾನು ಆತ್ಮಹತ್ಯೆಗೈಯುತ್ತೇನೆ. ನನಗೆ ಈಗಾಗಲೇ ಬೆದರಿಕೆ ಕರೆಗಳು ಬರುತ್ತಿವೆ” ಎಂದು ಆಕೆ ಹೇಳಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.