ಬಿಜೆಪಿಗೆ ಚುನಾವಣಾ ಆಯೋಗವು ಪತ್ನಿಯಂತೆ: ಶಿವಸೇನೆ
ಮುಂಬೈ, ಮೇ 31: ಉಪ ಚುನಾವಣೆಯಲ್ಲಿ ಇವಿಎಂ ಹಾಗೂ ವಿವಿಪ್ಯಾಟ್‌ಗಳ ದೋಷಗಳ ದೂರಿನ ಬಗ್ಗೆ ಚುನಾವಣಾ ಆಯೋಗವನ್ನು ಬುಧವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಚುನಾವಣಾ ಆಯೋಗ, ಪ್ರಜಾಪ್ರಭುತ್ವ ಹಾಗೂ ಚುನಾವಣೆಗಳು ಅಧಿಕಾರದಲ್ಲಿರುವವರಿಗೆ ಪತ್ನಿಯರಿದ್ದಂತೆ ಎಂದಿದೆ. ತನ್ನ ಮಿತ್ರ ಪಕ್ಷವಾದ ಬಿಜೆಪಿಯ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿರುವ ಶಿವಸೇನೆ, ಬಿಜೆಪಿ ನಿರುಂಕುಶಾಧಿಕಾರಿ ಮನಸ್ಥಿತಿ ಹೊಂದಿದೆ ಹಾಗೂ ತನ್ನ ಉದ್ದೇಶ ಈಡೇರಿಕೆಗಾಗಿ ಇವಿಎಂಗಳನ್ನು ತಿರುಚಿದೆ ಎಂದಿದೆ.
ಜನರು ಚುನಾವಣೆ ಪ್ರಕ್ರಿಯೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಅದು ಎಚ್ಚರಿಸಿದೆ. ನಮ್ಮ ದೇಶ ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲಾಗುತ್ತದೆ. ಇವಿಎಂಗಳು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಪ್ರಸ್ತುತ ಅಧಿಕಾರದಲ್ಲಿ ಇರುವವರು ತಮ್ಮ ನಿರುಂಕಶಾಧಿಕಾರಿ ಮನಸ್ಥಿತಿಯಿಂದ ಪ್ರಜಾಪ್ರಭುತ್ವವನ್ನು ಪತ್ನಿಯಂತೆ ಮಾಡಿಕೊಂಡಿದ್ದಾರೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ.
‘‘ಬಿಜೆಪಿ ಇವಿಎಂಗಳನ್ನು ತಿರುಚಿದೆ ಹಾಗೂ ತನ್ನ ಉದ್ದೇಶಗಳಿಗೆ ಯಂತ್ರಗಳನ್ನು ಬಳಸಿಕೊಳ್ಳುವಂತೆ ವ್ಯವಸ್ಥೆ ಮಾಡಿಕೊಂಡಿದೆ. ಚುನಾವಣೆ ಹಾಗೂ ಚುನಾವಣಾ ಆಯೋಗ ಅವರಿಗೆ ಪತ್ನಿಯರಿಂದ್ದಂತೆ’’ ಎಂದು ಅದು ಹೇಳಿದೆ.
‘‘ಪ್ರಸಕ್ತ ಚುನಾವಣಾ ಆಯೋಗ ಹಾಗೂ ಅದರ ಆಡಳಿತ ವ್ಯವಸ್ಥೆ ಸರಕಾರದ ಗುಲಾಮ. ಆದುದರಿಂದ ಅದು ಮದ್ಯ, ಹಣ ವಿತರಣೆ, ಸರಕಾರದ ನಿರುಂಕುಶಾಧಿಕಾರ ಹಾಗೂ ಬೆದರಿಕೆಯ ಹೇಳಿಕೆಯ ವಿರುದ್ಧದ ದೂರನ್ನು ಸ್ವೀಕರಿಸಲು ಸಿದ್ಧವಿಲ್ಲ’’ ಎಂದು ಸಂಪಾದಕೀಯವು ಆರೋಪಿಸಿದೆ.
ಇವಿಎಂಗಳು ಕಾರ್ಯ ನಿರ್ವಹಿಸದೇ ಇರಲು ಉಷ್ಣತೆಯಿಂದ ಕೂಡಿದ ಹವಾಮಾನ ಕಾರಣ ಎಂಬ ಚುನಾವಣಾ ಆಯೋಗ ಪ್ರತಿಪಾದನೆಯನ್ನು ಶಿವಸೇನೆ ವ್ಯಂಗ್ಯ ಮಾಡಿದೆ.