ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 1 ಪೈಸೆ ಇಳಿಕೆ

Update: 2018-05-30 16:02 GMT

ಹೊಸದಿಲ್ಲಿ, ಮೇ 30: ಸತತ 16 ದಿನ ಏರಿಕೆ ಕಂಡ ಪೆಟ್ರೋಲ್ ಹಾಗೂ ಡೀಸೆಲ್ ಧಾರಣೆ ಬುಧವಾರ ಕಡೆಗೂ ಇಳಿಕೆಯಾಗಿದೆ ಎಂಬ ವರದಿಯಿಂದ ಗ್ರಾಹಕರು ಸಂಭ್ರಮಗೊಂಡಿದ್ದರು. ಆದರೆ ಲೀಟರ್‌ಗೆ ಕೇವಲ ಒಂದು ಪೈಸೆ ಇಳಿಕೆಯಾಗಿದೆ ಎಂದು ಅಧಿಕೃತವಾಗಿ ತಿಳಿದುಬಂದಾಗ ಗ್ರಾಹಕರಿಗೆ ಭ್ರಮನಿರಸನವಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಶನ್(ಐಒಸಿಎಲ್)ವೆಬ್‌ಸೈಟ್‌ನಲ್ಲಿ ಬುಧವಾರ ಬೆಳಿಗ್ಗೆ ಪ್ರಕಟವಾದ ಮಾಹಿತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅನುಕ್ರಮವಾಗಿ ಪ್ರತೀ ಲೀಟರ್‌ಗೆ 60 ಪೈಸೆ ಹಾಗೂ 59 ಪೈಸೆ ಇಳಿಕೆಯಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲೇ ಐಒಸಿ ತನ್ನ ಪ್ರಕಟಣೆಯಲ್ಲಿ ತಿದ್ದುಪಡಿ ಮಾಡಿದ್ದು ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ ತಲಾ 1 ಪೈಸೆ ಕಡಿಮೆಯಾಗಿದೆ ಎಂದು ತಿಳಿಸಿದೆ. ಬುಧವಾರ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 78.42 , ಡೀಸೆಲ್ ಬೆಲೆ ರೂ.69.30, ಮುಂಬೈಯಲ್ಲಿ ಪೆಟ್ರೋಲ್ ಬೆಲೆ ರೂ.86.23, ಡೀಸೆಲ್ ಬೆಲೆ ರೂ. 73.78, ಕೋಲ್ಕತಾ ಮತ್ತು ಚೆನ್ನೈಯಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ ರೂ.81.05 ಮತ್ತು ರೂ. 81.42, ಡೀಸೆಲ್ ಬೆಲೆ ಕ್ರಮವಾಗಿ ರೂ. 71.58 ಮತ್ತು ರೂ. 73.17 ಆಗಿತ್ತು. ಕಚ್ಛಾ ತೈಲದ ದರ ಏರಿರುವುದು ಹಾಗೂ ಪೆಟ್ರೋಲ್, ಡೀಸೆಲ್ ಮೇಲೆ ಅಧಿಕ ಅಬಕಾರಿ ಸುಂಕ ವಿಧಿಸುತ್ತಿರುವುದು ಬೆಲೆ ಏರಲು ಪ್ರಧಾನ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ದೀರ್ಘಾವಧಿಯಲ್ಲಿ ಜಿಎಸ್‌ಟಿ ವ್ಯಾಪ್ತಿಯಡಿ ತರಲು ಸರಕಾರ ನಿರ್ಧರಿಸಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಇಂಧನ ಇಲಾಖೆಯ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಹೇಳಿದ್ದರು.

ಬಾಲಿಷ ಕ್ರಮ: ರಾಹುಲ್ ಟೀಕೆ

ಬುಧವಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಿಸಿ ಲೀಟರ್‌ಗೆ 1 ರೂ. ಇಳಿಕೆ ಮಾಡಿರುವುದು ಕೀಳು ಅಭಿರುಚಿಯ ಬಾಲಿಷ ಕ್ರಮವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪ್ರಧಾನಿ ಮೋದಿ ದೇಶದ ಜನರೊಂದಿಗೆ ತುಂಟಾಟ ನಡೆಸುತ್ತಿದ್ದಾರೆ ಎಂದಿರುವ ರಾಹುಲ್, ಕೇವಲ ಒಂದು ಪೈಸೆ ಬೆಲೆ ಇಳಿಸಿದ್ದೀರಿ. ನಿಮ್ಮ ತುಂಟಾಟದ ನಿರ್ಧಾರ ಕೀಳು ಅಭಿರುಚಿಯ ಬಾಲಿಷ ಕ್ರಮವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ತೈಲ ಬೆಲೆ ಇಳಿಸಿ ಎಂದು ತಾನು ಪ್ರಧಾನಿ ಮೋದಿಗೆ ಸವಾಲು ಹಾಕಿದ್ದೆ. ಬುಧವಾರ ತೈಲ ಬೆಲೆ ಇಳಿಕೆಯಾದಾಗ ಅವರು ಸವಾಲು ಸ್ವೀಕರಿಸಿದರು ಎಂದು ಖುಷಿಪಟ್ಟಿದ್ದೆ. ಆದರೆ 1 ಪೈಸೆ ಬೆಲೆ ಇಳಿಸುವುದು ಸವಾಲಿಗೆ ಸೂಕ್ತ ಪ್ರತಿಕ್ರಿಯೆ ಆಗಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News