ನಿಪಾಹ್ ವೈರಸ್ ಲಕ್ಷಣಗಳಿರುವ ಕನಿಷ್ಠ 753 ಜನರ ಮೇಲೆ ನಿಗಾ: ಡಬ್ಲ್ಯುಎಚ್‌ಒ

Update: 2018-06-01 13:54 GMT

ಜಿನಿವಾ,ಜೂ.1: ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ನಿಪಾಹ್ ವೈರಸ್‌ನಿಂದಾಗಿ ಮೇ 19ರಂದು ಮೊದಲ ಮೂರು ಸಾವುಗಳು ಸಂಭವಿಸಿದ ಬಳಿಕ ಈ ವೈರಸ್ ಸೋಂಕಿನ ಲಕ್ಷಣಗಳನ್ನು ದೃಢಪಡಿಸಿಕೊಳ್ಳಲು ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಕನಿಷ್ಠ 753 ಜನರನ್ನು ನಿರೀಕ್ಷಣೆಯಲ್ಲಿರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯು ತಿಳಿಸಿದೆ. ಕೇರಳದಲ್ಲಿ ಈ ವೈರಸ್‌ನಿಂದಾಗಿ ಈವರೆಗೆ 16 ಜನರು ಸಾವನ್ನಪ್ಪಿದ್ದಾರೆ.

ಮೇ 28ಕ್ಕೆ ಇದ್ದಂತೆ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ 15 ಜನರಲ್ಲಿ ನಿಪಾಹ್ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಡಬ್ಲ್ಯುಎಚ್‌ಒ ವರದಿಯು ತಿಳಿಸಿದೆ.

ಶಂಕಿತ ಸೋಂಕುಪೀಡಿತರ ಮಾದರಿಗಳನ್ನು ಮಣಿಪಾಲ ವೈರಾಣು ಸಂಶೋಧನಾ ಸಂಸ್ಥೆ ಮತ್ತು ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ(ಎನ್‌ಐವಿ)ಗೆ ಕಳುಹಿಸಲಾಗಿದ್ದು,ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದೂ ಅದು ಹೇಳಿದೆ.

ಇಲ್ಲಿ 71ನೇ ವಿಶ್ವ ಆರೋಗ್ಯ ಅಧಿವೇಶನದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು,ಕೇರಳದಲ್ಲಿ ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಮತ್ತು ಕೇಂದ್ರವು ರಾಜ್ಯದ ಆರೋಗ್ಯ ಸಚಿವಾಲಯಕ್ಕೆ ನಿರಂತರ ಬೆಂಬಲವನ್ನು ನೀಡುತ್ತಿದೆ. ಮೊದಲ ಸಾವು ವರದಿಯಾದ ಐದೇ ಗಂಟೆಗಳಲ್ಲಿ ನಾವು ಕ್ರಮಗಳನ್ನು ಆರಂಭಿಸಿದ್ದು,ಭಾರತೀಯ ವ್ಯೆದ್ಯಕೀಯ ಸಂಶೋಧನಾ ಮಂಡಳಿ,ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ,ಏಮ್ಸ್ ಮತ್ತು ರಾಮ ಮನೋಹರ ಲೋಹಿಯಾ ಆಸ್ಪತ್ರೆಯಿಂದ ವೈದ್ಯಕೀಯ ತಂಡಗಳನ್ನು ಅಲ್ಲಿಗೆ ರವಾನಿಸಿದ್ದೇವೆ. ಸೋಂಕುಪೀಡಿತ ಗ್ರಾಮದಲ್ಲಿಯ ಎಲ್ಲ 25 ಕುಟುಂಬಗಳನ್ನು ಪತ್ತೆ ಹಚ್ಚಿ,ಅವರನ್ನು ಪ್ರತ್ಯೇಕವಾಗಿಡಲಾಗಿದೆ ಎಂದು ತಿಳಿಸಿದರು.

ಈ ರೋಗವು ಸಾಂಕ್ರಾಮಿಕವಾಗಿದ್ದು,ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ವೈದ್ಯಕೀಯ ಸಿಬ್ಬಂದಿಗಳು ಸೋಂಕಿಗೊಳಗಾಗಬಹುದು ಎನ್ನುವುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ. ಈ ಹಿಂದೆ 2001 ಮತ್ತು 2007ರಲ್ಲಿ ನಿಪಾಹ್ ಪ್ರಕರಣಗಳು ವರದಿಯಾಗಿದ್ದವು ಎಂದರು.

ನವೀಕರಣಗೊಳ್ಳುತ್ತಿರುವ ಮನೆಯ ಆವರಣದಲ್ಲಿರುವ ಪಾಳು ಬಿದ್ದಿರುವ ಬಾವಿಯಲ್ಲಿ ಬಾವಲಿಗಳನ್ನು ಕ್ಷೇತ್ರ ತನಿಖಾ ತಂಡವು ಪತ್ತೆ ಹಚ್ಚಿದ್ದು,ಒಂದು ಬಾವಲಿಯನ್ನು ಹಿಡಿದು ಪ್ರಯೋಗಾಲಯ ಪರೀಕ್ಷೆಗಾಗಿ ಪುಣೆಯ ಎನ್‌ಐವಿಗೆ ಕಳುಹಿಸಲಾಗಿದೆ ಎಂದರು.

ಈಗ ಕಾಣಿಸಿಕೊಂಡಿರುವ ಸೋಂಕಿನಲ್ಲಿ ತೀವ್ರ ಉಸಿರಾಟದ ತೊಂದರೆ ಮತ್ತು ಮಿದುಳು ಜ್ವರವನ್ನು ಗಮನಿಸಲಾಗಿದೆ. ಕೇರಳದಲ್ಲಿ ಇದೇ ಮೊದಲ ಬಾರಿಗೆ ಈ ಸೋಂಕು ಕಾಣಿಸಿಕೊಂಡಿದ್ದು,ದೇಶದಲ್ಲಿ ಮೂರನೇ ಬಾರಿಗೆ ಕಾಣಿಸಿಕೊಂಡಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News